ಕನ್ನಡದಲ್ಲಿ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ

ಮೂಲ ಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಎಲ್ಲರೂ ಎಳ್ಳು ಬೆಲ್ಲ ತಿಂದು ಒಳ್ಳೆ, ಸಿಹಿ ಮಾತನಾಡಿ' ಎಂದು ಕನ್ನಡದಲ್ಲಿ ಶುಭಾಶಯ ಕೋರಿದರು.

Last Updated : Jan 9, 2019, 09:18 PM IST
ಕನ್ನಡದಲ್ಲಿ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ title=

ಸೋಲಾಪುರ: ಮಹಾರಾಷ್ಟ್ರದ ಸೋಲಾಪುರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲಿ ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದರು. 

ಇಂದಿಲ್ಲಿ ಹಲವು ಮೂಲ ಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಸೋಲಾಪುರದಲ್ಲಿ ಕನ್ನಡಿಗರೂ ಇದ್ದಾರೆ ಎಂಬುದನ್ನು ಅರಿತು ಮರಾಠಿಯಲ್ಲಿ ಸಂಕ್ರಾಂತಿಯ ಶುಭಾಶಯ ಕೋರುವುದರೊಂದಿಗೆ  'ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು, ಎಲ್ಲರೂ ಎಳ್ಳು ಬೆಲ್ಲ ತಿಂದು ಒಳ್ಳೆ, ಸಿಹಿ ಮಾತನಾಡಿ' ಎಂದು ಕನ್ನಡದಲ್ಲಿ ಶುಭಾಶಯ ಕೋರಿದರು.

ಇದೇ ಸಂದರ್ಭದಲ್ಲಿ, ಸರ್ಕಾರದ ವಿರುದ್ಧ ನಾನಾ ಸುಳ್ಳುಗಳನ್ನು ಹೇಳುತ್ತಾ ಅಪಪ್ರಚಾರ ನಡೆಸುವವರಿಗೆ ಸಂಸತ್ತು ನಿನ್ನೆಯೇ ಬಲವಾದ ಉತ್ತರ ನೀಡಿದೆ. ಮೇಲ್ವರ್ಗದ ಬಡವರಿಗೆ ಶೇ 10ರ ಮೀಸಲು ಕಲ್ಪಿಸುವ ವಿಧೇಯಕವನ್ನು ಲೋಕಸಭೆ ಸುಸೂತ್ರವಾಗಿ ಅಂಗೀಕರಿಸಿದೆ. ಆರ್ಥಿಕ ದುರ್ಬಲರಿಗೆ ಶೇ.10ರ ಉದ್ಯೋಗ ಮತ್ತು ಮೀಸಲಾತಿ ಕಲ್ಪಿಸುವ ಮಸೂದೆ ರಾಜ್ಯಸಭೆಯಲ್ಲೂ ಅಂಗೀಕಾರವಾಗುವ ವಿಶ್ವಾಸ ವ್ಯಕ್ತಪಡಿಸಿದ ಮೋದಿ, ಈ ಮಸೂದೆಯಿಂದ ದಲಿತರು, ಬುಡಕಟ್ಟು ಜನರು ಮತ್ತು ಅವಕಾಶ ವಂಚಿತರಿಗೆ ಯಾವ ರೀತಿಯ ತೊಂದರೆಯಾಗುವುದಿಲ್ಲ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು. 

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಕಾಂಗ್ರೆಸ್‌ ಪಕ್ಷ ರಫೇಲ್‌ ಫೈಟರ್‌ ಜೆಟ್‌ ಖರೀದಿ ವಿರುದ್ಧದ ಆರೋಪಗಳ ಮೂಲಕ ಏನನ್ನು ಸಾಧಿಸಲು ಮತ್ತು ಸಾಬೀತುಪಡಿಸಲು ಹೊರಟಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಮೊದಲು ಕಾಂಗ್ರೆಸ್ ತನ್ನ ಮೇಲಿರುವ ಹಲವು ಕಳಂಕಗಳನ್ನೂ ನಿವಾರಿಸಿಕೊಂಡು ಬಳಿಕ ಸರ್ಕಾರದ ಬಗ್ಗೆ ಮಾತನಾಡಲಿ ಎಂದು ಆಗ್ರಹಿದರು.

ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ ಬಂಧಿತನಾಗಿರುವ ಕ್ರಿಶ್ಚಿಯನ್ ಮೈಕಲ್, ರಫೇಲ್ ಕಂಪನಿಯ ಸ್ಪರ್ಧಿ ಯೂರೋಫೈಟರ್ ಕಂಪನಿಗಾಗಿ ಲಾಬಿ ನಡೆಸಿದ್ದ ಎಂದು ವರದಿ ಬಂದಿರುವ ಹಿನ್ನೆಲೆಯಲ್ಲಿ, ತನ್ನ ಪಕ್ಷದ ಯಾವ ನಾಯಕ ಮೈಕೆಲ್ ಜತೆ ನಿಕಟ ಸಂಬಂಧ ಹೊಂದಿದ್ದಾನೆ ಎಂಬುದನ್ನು ಕಾಂಗ್ರೆಸ್ ಬಹಿರಂಗಪಡಿಸಬೇಕು ಎಂದು ಮೋದಿ ಆಗ್ರಹಿಸಿದರು.

Trending News