ಯೆಮೆನ್‌ನ ದಾಳಿಕೋರ ಹೌತಿಗಳ ಮೇಲೆ ಅಮೆರಿಕಾ - ಯುಕೆ ಬಾಂಬ್ ದಾಳಿ

Houthis in Yemen : ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಯುನೈಟೆಡ್ ಕಿಂಗ್‌ಡಮ್ ಯೆಮೆನ್‌ನಲ್ಲಿರುವ ಹೌತಿ ಬಂಡುಕೋರರ ವಿರುದ್ಧ ವಾಯು ದಾಳಿ ಆರಂಭಿಸಿವೆ. 

Written by - Girish Linganna | Last Updated : Jan 13, 2024, 10:53 AM IST
  • ಯೆಮೆನ್‌ನಲ್ಲಿರುವ ಹೌತಿ ಬಂಡುಕೋರರು
  • ಹೌತಿ ಬಂಡುಕೋರರ ವಿರುದ್ಧ ವಾಯು ದಾಳಿ
  • ಹಡಗುಗಳ ಮೇಲಿನ ಆಕ್ರಮಣಗಳಿಗೆ ಪ್ರತಿಯಾಗಿ ಈ ದಾಳಿ
ಯೆಮೆನ್‌ನ ದಾಳಿಕೋರ ಹೌತಿಗಳ ಮೇಲೆ ಅಮೆರಿಕಾ - ಯುಕೆ ಬಾಂಬ್ ದಾಳಿ title=

Houthis in Yemen : ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಯುನೈಟೆಡ್ ಕಿಂಗ್‌ಡಮ್ ಯೆಮೆನ್‌ನಲ್ಲಿರುವ ಹೌತಿ ಬಂಡುಕೋರರ ವಿರುದ್ಧ ವಾಯು ದಾಳಿ ಆರಂಭಿಸಿವೆ. ಯೆಮೆನ್‌ನ ಸನಾ, ಹುದೈದಾ, ಧಮಾರ್, ಮತ್ತು ಸಾದಾ ಪ್ರದೇಶಗಳಲ್ಲಿ ಈ ವಾಯುದಾಳಿಗಳು ನಡೆದಿವೆ. ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಅವರು ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ಹೌತಿಗಳು ನಡೆಸಿದ ಆಕ್ರಮಣಗಳಿಗೆ ಪ್ರತಿಯಾಗಿ ಈ ದಾಳಿ ನಡೆಸಲಾಗುತ್ತಿದೆ ಎಂದಿದ್ದಾರೆ. ಯೆಮೆನ್‌ನ ಬಹುಪಾಲು ನಿಯಂತ್ರಣ ಹೊಂದಿರುವ ಹೌತಿಗಳು, ನಾವು ಹಮಾಸ್ ಸಂಘಟನೆಗೆ ನೆರವು ನೀಡುವ ಸಲುವಾಗಿ ಇಸ್ರೇಲ್‌ಗೆ ತೆರಳುವ ಹಡಗುಗಳ ಮೇಲೆ ದಾಳಿ ನಡೆಸುತ್ತಿದ್ದೇವೆ ಎಂದಿದ್ದರು. ಹೌತಿ ಸಂಘಟನೆಯ ಉಪ ವಿದೇಶಾಂಗ ಸಚಿವ ಈಗಾಗಲೇ ಅಮೆರಿಕಾ ಮತ್ತು ಯುಕೆಗೆ ಈ ದಾಳಿಯ ಪರಿಣಾಮಗಳು ತೀವ್ರವಾಗಿರುತ್ತವೆ ಎಂದಿದ್ದಾರೆ.

ಯುಕೆಯ ರಾಯಲ್ ಏರ್ ಫೋರ್ಸ್ ಸಹ ಮಿಲಿಟರಿ ಪ್ರದೇಶಗಳ ಮೇಲೆ ನಡೆದ ಈ ಗುರಿ ಆಧಾರಿತ ದಾಳಿಗಳಲ್ಲಿ ಭಾಗವಹಿಸಿತ್ತು ಎಂದು ಯುಕೆ ಪ್ರಧಾನಿ ರಿಷಿ ಸುನಾಕ್ ಅವರು ಹೇಳಿದ್ದಾರೆ. ಅವರು ಈ ದಾಳಿಗಳು ಸೀಮಿತವಾಗಿದ್ದವು ಎಂದಿದ್ದು, ಆದರೆ ಸ್ವ ರಕ್ಷಣೆಗಾಗಿ ಅವಶ್ಯಕವಾಗಿದ್ದವು ಎಂದಿದ್ದಾರೆ. ಅಮೆರಿಕಾ ಅಧ್ಯಕ್ಷ ಬಿಡೆನ್ ಅವರು ಈ ಕಾರ್ಯಾಚರಣೆಗೆ ನೆದರ್ಲ್ಯಾಂಡ್ಸ್, ಆಸ್ಟ್ರೇಲಿಯಾ, ಕೆನಡಾ, ಮತ್ತು ಬಹ್ರೇನ್ ಸಹ ಬೆಂಬಲ ನೀಡಿದ್ದವು ಎಂದಿದ್ದಾರೆ.

ಹೌತಿಗಳು ಎಂದರೆ ಯಾರು?

ಇರಾನ್ ಜೊತೆ ಸಂಪರ್ಕ ಹೊಂದಿರುವ, ಹಮಾಸ್ ಮತ್ತು ಹೆಜ್ಬೊಲ್ಲಾ ರೀತಿಯಲ್ಲಿ ಹೌತಿ ಸಹ ಶಿಯಾ ಮುಸ್ಲಿಮರ ಮಿಲಿಟರಿ ಸಂಘಟನೆಯಾಗಿದೆ. ಈ ಸಂಘಟನೆ ಮಧ್ಯ ಪೂರ್ವದಲ್ಲಿ ಪಾಶ್ಚಾತ್ಯ ಪ್ರಭಾವವನ್ನು ಕಡಿಮೆಗೊಳಿಸುವ ಗುರಿ ಹೊಂದಿದೆ. ಅವರ ಧ್ಯೇಯ ವಾಕ್ಯ "ಅಮೆರಿಕಾಗೆ ಸಾವಾಗಲಿ, ಇಸ್ರೇಲ್‌ಗೆ ಸಾವಾಗಲಿ, ಯಹೂದಿಗಳಿಗೆ ಶಪಿಸುವಂತಾಗಲಿ" ಎಂಬುದಾಗಿದೆ.

ಇದನ್ನೂ ಓದಿ: ವಿಶ್ವದಲ್ಲೇ ಅತ್ಯಂತ ಸುರಕ್ಷಿತ ದೇಶದ ಬಗ್ಗೆ ನಿಮಗೇಷ್ಟು ಗೊತ್ತು..? 

ಈ ಸಂಘಟನೆ 1990ರ ದಶಕದಲ್ಲಿ ಆರಂಭಗೊಂಡಿತ್ತು. ಇದರ ಬೆಂಬಲಿಗರು ಬಹುತೇಕ ಜ಼ೈದಿ ಶಿಯಾ ಮುಸ್ಲಿಮರಾಗಿದ್ದು, ಹೌತಿ ಬುಡಕಟ್ಟಿನ ಸದಸ್ಯರಾಗಿದ್ದಾರೆ. ಅವರು ಯೆಮೆನ್‌ ಅಧ್ಯಕ್ಷರಾಗಿದ್ದ ಅಲಿ ಅಬ್ದುಲ್ಲಾ ಸಾಲೆಹ್ ಅವರು ಸೌದಿ ಅರೇಬಿಯಾ ಮತ್ತು ಇಸ್ರೇಲ್ ಜೊತೆಗೆ ಅಪಾರ ಸ್ನೇಹ ಹೊಂದಿದ್ದರು ಎಂದು ಭಾವಿಸಿದ್ದು, ಅದು ಹಲವು ವರ್ಷಗಳ ಕಾಲ ಉದ್ವಿಗ್ನತೆಗೆ ಹಾದಿ ಮಾಡಿಕೊಟ್ಟಿತು. ಅಲಿ ಅಬ್ದುಲ್ಲಾ ಸಾಲೆಹ್ ಅವರು 1978ರಿಂದ 1990ರ ತನಕ ಯೆಮೆನ್ ಅರಬ್ ರಿಪಬ್ಲಿಕ್ (ಉತ್ತರ ಯೆಮೆನ್) ಅಧ್ಯಕ್ಷರಾಗಿ, 1990ರಿಂದ 2012ರಲ್ಲಿ ರಾಜೀನಾಮೆ ನೀಡುವ ತನಕ ಯುನಿಫೈಡ್ ರಿಪಬ್ಲಿಕ್ ಆಫ್ ಯೆಮೆನ್ ಅಧ್ಯಕ್ಷರಾಗಿ ಕಾರ್ಯಾಚರಿಸಿದ್ದರು.

ಯೆಮೆನಿ ಮಿಲಿಟರಿ 2004ರಲ್ಲಿ ಹೌತಿ ಗುಂಪಿನ ಸ್ಥಾಪಕ ಹುಸೇನ್ ಅಲ್ ಹೌತಿಯನ್ನು ಹತ್ಯೆಗೈದ ಬಳಿಕ, ಹೌತಿಗಳು ಒಂದು ದಂಗೆಯನ್ನು ಆರಂಭಿಸಿದರು. ಅವರು 2011ರಲ್ಲಿ ಯೆಮೆನಿ ಕ್ರಾಂತಿಯಲ್ಲೂ ಭಾಗವಹಿಸಿದರು.

ಹೌತಿ ಬಂಡುಕೋರರು 2014ರಲ್ಲಿ ಯೆಮೆನ್ ರಾಜಧಾನಿ ಸನಾವನ್ನು ವಶಪಡಿಸಿಕೊಂಡ ಬಳಿಕ ಇನ್ನಷ್ಟು ಪ್ರಾಮುಖ್ಯತೆ ಪಡೆದುಕೊಂಡರು. ಇದರಿಂದಾಗಿ ಯೆಮೆನ್‌ನಲ್ಲಿ ಅಂತರ್ಯುದ್ಧ ನಡೆದು, ಅದರ ಪರಿಣಾಮವಾಗಿ ಬಹುತೇಕ 4 ಲಕ್ಷ ಜನ ಸಾವನ್ನಪ್ಪಿದರು. 2015ರಲ್ಲಿ ಸಾಲೆಹ್ ಅವರೊಡನೆ ಕೈ ಜೋಡಿಸುವ ಮೂಲಕ ಹೌತಿಗಳು ತಮ್ಮ ಪ್ರಾಂತ್ಯಗಳನ್ನು ಇನ್ನಷ್ಟು ವಿಸ್ತರಿಸಿ, ಪಶ್ಚಿಮ ಯೆಮೆನ್‌ನ ದೊಡ್ಡ ಭಾಗಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಇದರಲ್ಲಿ ಕೆಂಪು ಸಮುದ್ರಕ್ಕೆ ಪ್ರವೇಶ ಒದಗಿಸುವ, 16 ಮೈಲಿ ಉದ್ದದ ಪ್ರಮುಖ ಪ್ರದೇಶವಾದ ಬಾಬ್ ಅಲ್ ಮಂದೇಬ್ ಜಲಸಂಧಿಯೂ ಸೇರಿತ್ತು.

ಹೌತಿಗಳು ಯೆಮೆನ್ ರಾಜಧಾನಿಯನ್ನು ವಶಪಡಿಸಿಕೊಂಡ ಬಳಿಕ ಸೌದಿ ಅರೇಬಿಯಾ ಮಧ್ಯ ಪ್ರವೇಶ ನಡೆಸಿ, ಜಾಗತಿಕವಾಗಿ ಗುರುತಿಸಲ್ಪಟ್ಟಿದ್ದ, ಸುನ್ನಿ ಮುಸ್ಲಿಂ ನಾಯಕತ್ವದ ಸರ್ಕಾರವನ್ನು ಮರಳಿ ಜಾರಿಗೆ ತರಲು ಪ್ರಯತ್ನಿಸಿತು. 2015ರಲ್ಲಿ ಸೌದಿ ಅರೇಬಿಯಾ ಮತ್ತು ಯುಎಇಗಳು ಹೌತಿ ಪ್ರದೇಶಗಳ ಮೇಲೆ ಬಾಂಬ್ ದಾಳಿ ನಡೆಸಲು ಆರಂಭಿಸಿದವು. ಆದರೆ ಅಮಾಯಕ ನಾಗರಿಕರು ಅದರಿಂದ ಸಾವಿಗೀಡಾಗಿ, ಅವುಗಳು ವ್ಯಾಪಕ ಟೀಕೆ ಎದುರಿಸುವಂತಾಯಿತು. ಇದರಿಂದಾಗಿ ಸೌದಿ ಅರೇಬಿಯಾಗೆ ಆಯುಧ ಪೂರೈಕೆ ನಡೆಸದಂತೆ ಯುಕೆಯನ್ನು ಆಗ್ರಹಿಸಲಾಯಿತು. ಅದರೊಡನೆ, ಇರಾನ್ ಹೌತಿ ಬಂಡುಕೋರರಿಗೆ ಆಯುಧಗಳು, ತರಬೇತಿ ಮತ್ತು ಹಣ ಒದಗಿಸಿದೆ ಎನ್ನಲಾಗಿತ್ತು.

ಇದನ್ನೂ ಓದಿ: ಫ್ರಾನ್ಸ್‌ನ ನೂತನ ಪ್ರಧಾನಿಯಾಗಿ ಗೇಬ್ರಿಯಲ್ ಅಟ್ಟಲ್ ಆಯ್ಕೆ

ಈ ಯುದ್ಧ ಮಧ್ಯ ಪೂರ್ವದಲ್ಲಿ ಹೆಚ್ಚಿನ ಅಧಿಕಾರ ಹೊಂದುವ ಆಸೆಯಲ್ಲಿರುವ ಇರಾನ್ ಮತ್ತು ಸೌದಿ ಅರೇಬಿಯಾ ನಡುವಿನ ಉದ್ವಿಗ್ನತೆಯ ಭಾಗವೆಂದು ಪರಿಗಣಿಸಲಾಗಿದೆ. 2017ರಲ್ಲಿ, ಸೌದಿ ಅರೇಬಿಯಾದ ರಿಯಾದ್ ನಗರದ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ಪ್ರಯೋಗಿಸಿದ್ದೇವೆ ಎಂದು ಹೌತಿ ಬಂಡುಕೋರರು ಹೇಳಿದಾಗ ಈ ಉದ್ವಿಗ್ನತೆ ಇನ್ನಷ್ಟು ಹೆಚ್ಚಾಯಿತು.

ಉಗ್ರರು ಅದೇ ವರ್ಷ ತಮಗೆ ಬೆಂಬಲ ನಿಲ್ಲಿಸಿ, ಸೌದಿ ನೇತೃತ್ವದ ಗುಂಪಿಗೆ ಸೇರ್ಪಡೆಗೊಂಡ ಸಾಲೆಹ್ ಅವರನ್ನು ಹತ್ಯೆಗೈದರು. ಬಂಡುಕೋರರು ಸೌದಿ ಅರೇಬಿಯಾ, ಯುಎಇ, ಮತ್ತು ಇತ್ತೀಚೆಗೆ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿ, ಇತ್ತೀಚಿನ ಕೆಂಪು ಸಮುದ್ರದ ಉದ್ವಿಗ್ನತೆಗೂ ಕಾರಣವಾದರು.

ಲೇಖಕರು : ಗಿರೀಶ್ ಲಿಂಗಣ್ಣ (ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News