ಮಾಲ್ಡೀವ್ಸ್ ನೂತನ ಅಧ್ಯಕ್ಷ ಅಧಿಕಾರ ಕಳೆದುಕೊಳ್ಳುವ ದಿನ ಸನ್ನಿಹಿತವೇ?

ಆಡಳಿತಾರೂಢ ಪಿಪಿಎಂ-ಪಿಎನ್‌ಸಿ ಮೈತ್ರಿಕೂಟ ಸಂಸತ್ತಿನ ಸಭಾಧ್ಯಕ್ಷ ಮೊಹಮದ್ ಅಸ್ಲಾಮ್ ಮತ್ತು ಉಪಾಧ್ಯಕ್ಷ ಅಹ್ಮದ್ ಸಲೀಮ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದೆ ಎನ್ನಲಾಗಿದೆ. ಆಡಳಿತಾರೂಢ ಮೈತ್ರಿಕೂಟದ ಸದಸ್ಯರು ಸಭಾಧ್ಯಕ್ಷರು ಸಂಸತ್ತಿನಲ್ಲಿ ನಡೆಯುತ್ತಿದ್ದ ಕೋಲಾಹಲವನ್ನು ತಡೆಯಲು ಪ್ರಯತ್ನಿಸುವುದು ಬಿಟ್ಟು, ಅದನ್ನು ಉತ್ತೇಜಿಸುವಂತೆ ನಡೆದುಕೊಂಡಿದ್ದು, ಅದನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ. 

Written by - Girish Linganna | Last Updated : Jan 30, 2024, 02:58 PM IST
  • ಮಾಲ್ಡೀವ್ಸ್ ಸಂಸತ್ತಿನಲ್ಲಿ ಬಹುಮತ ಹೊಂದಿರುವ, ಪ್ರಮುಖ ವಿರೋಧ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ತಾನು ಈಗಾಗಲೇ ಪದಚ್ಯುತಿ ಪ್ರಕ್ರಿಯೆಯನ್ನು ಆರಂಭಿಸಲು ಬೇಕಾದ, 34 ಸದಸ್ಯರ ಸಹಿ ಸಂಗ್ರಹಿಸಿರುವುದಾಗಿ ಹೇಳಿದೆ.
  • ಇದರಲ್ಲಿ ಎಂಡಿಪಿ ಮತ್ತು ಡೆಮಾಕ್ರಾಟ್ ಸದಸ್ಯರ ಸಹಿಗಳಿದ್ದು, ಮುಯಿಝು ಪದಚ್ಯುತಿಗೆ ಅನುಮತಿ ನೀಡಿದ್ದಾರೆ ಎನ್ನಲಾಗಿದೆ.
  • ಜನವರಿ 29, ಸೋಮವಾರದಂದು ಸಭೆ ಸೇರಿದ್ದ ಎಂಡಿಪಿಯ ಸಂಸದೀಯ ಗುಂಪು ಸರ್ವಾನುಮತದಿಂದ ಮಹಾಭಿಯೋಗ ಪ್ರಕ್ರಿಯೆಗೆ ಚಾಲನೆ ನೀಡಲು ಒಪ್ಪಿಗೆ ಸೂಚಿಸಿದೆ.
ಮಾಲ್ಡೀವ್ಸ್ ನೂತನ ಅಧ್ಯಕ್ಷ ಅಧಿಕಾರ ಕಳೆದುಕೊಳ್ಳುವ ದಿನ ಸನ್ನಿಹಿತವೇ? title=

ಮಾಲ್ಡೀವ್ಸ್‌ನ ನೂತನವಾಗಿ ಚುನಾಯಿತರಾದ, ಚೀನಾ ಪರ ಅಪಾರ ಒಲವುಳ್ಳ ಅಧ್ಯಕ್ಷರಾದ ಮೊಹಮದ್ ಮುಯಿಝು ಅವರು ಸದ್ಯದಲ್ಲೇ ಮಾಲ್ಡೀವ್ಸ್ ಸಂಸತ್ತಿನಲ್ಲಿ ಮಹಾಭಿಯೋಗ (ಪದಚ್ಯುತಿ) ಪ್ರಕ್ರಿಯೆ ಎದುರಿಸುವ ಸಾಧ್ಯತೆಗಳು ದಟ್ಟವಾಗಿವೆ. ಅಂದರೆ, ಇತ್ತೀಚೆಗೆ ಅಧ್ಯಕ್ಷರಾಗಿ ಚುನಾಯಿತರಾಗಿರುವ ಮುಯಿಝು ಅಧಿಕಾರ ಕಳೆದುಕೊಳ್ಳುವ ಲಕ್ಷಣಗಳಿವೆ. ಮಾಲ್ಡೀವಿಯನ್ ಸಂವಿಧಾನದ ಪ್ರಕಾರ, ಮಾಲ್ಡೀವ್ಸ್ ಅಧ್ಯಕ್ಷರನ್ನು ಪದಚ್ಯುತಗೊಳಿಸಲು ನಾಲ್ಕನೇ ಮೂರರಷ್ಟು ಪೀಪಲ್ಸ್ ಮಜ್ಲಿಸ್ (ಮಾಲ್ಡೀವಿಯನ್ ಸಂಸತ್ತು) ಮತ ಬೇಕಾಗುತ್ತದೆ. ಮಾಲ್ಡೀವ್ಸ್ ಸಂಸತ್ತಿನಲ್ಲಿ, ಆಡಳಿತಾರೂಢ ಅಧ್ಯಕ್ಷರ ಸಚಿವ ಸಂಪುಟಕ್ಕೆ ನೂತನ ಸಚಿವರ ಸೇರ್ಪಡೆಗೆ ಮಹತ್ವದ ಮತದಾನದ ಸಂದರ್ಭದಲ್ಲಿ ವಿರೋಧ ಪಕ್ಷಗಳ ಸಂಸದರು ಸಂಸತ್ತಿನಲ್ಲಿ ಆಡಳಿತ ಪಕ್ಷದವರೊಡನೆ ಹೊಡೆದಾಟ ನಡೆಸಿ, ಸಂಪೂರ್ಣ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಈ ಹೊಸ ಬೆಳವಣಿಗೆಗಳು ನಡೆದಿವೆ.

ಮಾಲ್ಡೀವ್ಸ್ ಸಂಸತ್ತಿನಲ್ಲಿ ಬಹುಮತ ಹೊಂದಿರುವ, ಪ್ರಮುಖ ವಿರೋಧ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ತಾನು ಈಗಾಗಲೇ ಪದಚ್ಯುತಿ ಪ್ರಕ್ರಿಯೆಯನ್ನು ಆರಂಭಿಸಲು ಬೇಕಾದ, 34 ಸದಸ್ಯರ ಸಹಿ ಸಂಗ್ರಹಿಸಿರುವುದಾಗಿ ಹೇಳಿದೆ. ಇದರಲ್ಲಿ ಎಂಡಿಪಿ ಮತ್ತು ಡೆಮಾಕ್ರಾಟ್ ಸದಸ್ಯರ ಸಹಿಗಳಿದ್ದು, ಮುಯಿಝು ಪದಚ್ಯುತಿಗೆ ಅನುಮತಿ ನೀಡಿದ್ದಾರೆ ಎನ್ನಲಾಗಿದೆ. ಜನವರಿ 29, ಸೋಮವಾರದಂದು ಸಭೆ ಸೇರಿದ್ದ ಎಂಡಿಪಿಯ ಸಂಸದೀಯ ಗುಂಪು ಸರ್ವಾನುಮತದಿಂದ ಮಹಾಭಿಯೋಗ ಪ್ರಕ್ರಿಯೆಗೆ ಚಾಲನೆ ನೀಡಲು ಒಪ್ಪಿಗೆ ಸೂಚಿಸಿದೆ.

ಆಡಳಿತಾರೂಢ ಮೈತ್ರಿಕೂಟದ ಪ್ರೋಗ್ರೆಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್ (ಪಿಪಿಎಂ) ಮತ್ತು ಮುಯಿಝು ಅವರ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ (ಪಿಎನ್‌ಸಿ) ಪಕ್ಷಗಳು ನಾಲ್ವರು ನೂತನ ಸಚಿವರನ್ನು - ಅಟಾರ್ನಿ ಜನರಲ್ ಅಹ್ಮದ್ ಉಸ್ಮಾನ್ ಅವರನ್ನು ವಸತಿ ಸಚಿವರಾಗಿ,  ಅಲಿ ಹೈದರ್ ಅವರನ್ನು ಭೂ ಮತ್ತು ನಗರಾಭಿವೃದ್ಧಿ ಸಚಿವರಾಗಿ, ಮೊಹಮದ್ ಶಹೀಮ್ ಅವರನ್ನು ಇಸ್ಲಾಮಿಕ್ ವ್ಯವಹಾರಗಳ ಸಚಿವರಾಗಿ, ಮತ್ತು ಅಲಿ ಸಯೀದ್ ಅವರನ್ನು ಆರ್ಥಿಕ ಅಭಿವೃದ್ಧಿ ಮತ್ತು ವ್ಯಾಪಾರ ಸಚಿವರಾಗಿ ನೇಮಿಸುವುದನ್ನು ವಿರೋಧ ಪಕ್ಷಗಳಾದ ಎಂಡಿಪಿ ಮತ್ತು ಡೆಮಾಕ್ರಾಟ್‌ಗಳು ವಿರೋಧಿಸಿದ್ದವು. ಈ ನಿಲುವನ್ನು ಆಡಳಿತ ಪಕ್ಷಗಳು ಟೀಕಿಸಿ, ನೂತನ ಸಚಿವರ ನೇಮಕಾತಿಯನ್ನು ತಡೆಯುವುದರಿಂದ ಸರ್ಕಾರಕ್ಕೆ ತನ್ನ ನಾಗರಿಕರಿಗೆ ಸಮರ್ಪಕ ಸೇವೆ ಒದಗಿಸಲು ಅನನುಕೂಲ ಮಾಡಿದಂತಾಗುತ್ತದೆ ಎಂದು ಆಕ್ಷೇಪಿಸಿದ್ದವು.

ವಿರೋಧ ಪಕ್ಷಗಳ ನಡೆಯನ್ನು ವಿರೋಧಿಸಿ, ಆಡಳಿತ ಪಕ್ಷದ ಸಂಸದರು ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿದರು. ಇದರ ಪರಿಣಾಮವಾಗಿ, ಕಂಡಿತೀಮ್ ಕ್ಷೇತ್ರದ ಪಿಎನ್‌ಸಿ ಸಂಸದ ಅಬ್ಬುಲ್ಲಾ ಶಹೀಮ್ ಅಬ್ದುಲ್ ಹಕೀಮ್ ಮತ್ತು ಕೆಂದಿಕುಲ್ಹುದೂ ಕ್ಷೇತ್ರದ ಎಂಡಿಪಿ ಸಂಸದ ಅಹ್ಮದ್ ಈಸಾ ನಡುವೆ ಹೊಡೆದಾಟ ನಡೆಯಿತು. ಮಾಲ್ಡೀವಿಯನ್ ನಾಯಕರಿಬ್ಬರು ಪರಸ್ಪರರನ್ನು ಹೊಡೆಯುತ್ತಾ, ಅಬ್ದುಲ್ಲಾ ಶಹೀಮ್ ಅವರು ಈಸಾ ಅವರನ್ನು ಬೀಳಿಸಿ, ಬಿದ್ದು ಹೋದರು. ಅಲ್ಲಿನ ವೀಡಿಯೋ ದೃಶ್ಯಗಳು ಶಹೀಮ್ ಈಸಾ ಅವರ ಕಾಲನ್ನು ಗಟ್ಟಿಯಾಗಿ ಹಿಡಿದುದರಿಂದ ಅವರಿಬ್ಬರೂ ಬಿದ್ದು ಹೋದುದನ್ನು ತೋರಿಸಿದ್ದವು. ಇನ್ನೊಂದು ವೀಡಿಯೋದಲ್ಲಿ ಈಸಾ ಶಹೀಮ್ ಅವರ ಕತ್ತಿಗೆ ಒದ್ದು, ಅವರ ಕೂದಲು ಹಿಡಿದು ಎಳೆಯುತ್ತಿದ್ದರು. ತಲೆಯಲ್ಲಿ ಸಾಕಷ್ಟು ಗಾಯಗೊಂಡ ಶಹೀಮ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಆ ರಾತ್ರಿ ಮಾಲ್ಡೀವಿಯನ್ ಸಂಸತ್ತಿನ ಮತ್ತೊಂದು ಅವಧಿಯನ್ನು ಕರೆಯಲಾಯಿತಾದರೂ, ಅದೂ ಸಹ ಗದ್ದಲದಲ್ಲೇ ಕೊನೆಗೊಂಡಿತು. ಸೋಮವಾರ ಈ ವಿಚಾರವನ್ನು ಮರಳಿ ಮತಕ್ಕೆ ಹಾಕಿದರೂ, ಅದರಿಂದಲೂ ಯಾವುದೇ ಪರಿಹಾರ ಲಭಿಸಲಿಲ್ಲ. ಭಾನುವಾರ ಸಂಸತ್ತಿನ ಚಟುವಟಿಕೆಗಳಿಗೆ ಅಡಚಣೆ ಉಂಟಾದ ಬಳಿಕ, ಎಂಡಿಪಿ ಒಂದು ವೇಳೆ ಆಡಳಿತ ಪಕ್ಷಗಳು ಸಂಸತ್ತಿಗೆ ತೊಂದರೆ ಉಂಟು ಮಾಡುವುದನ್ನು ಮುಂದುವರಿಸಿದರೆ, ತಾನು ಗೃಹ ಸಚಿವ ಅಲಿ ಇಹುಸಾನ್ ಮತ್ತು ರಕ್ಷಣಾ ಸಚಿವ ಮೊಹಮದ್ ಘಸ್ಸಾನ್ ಮೌಮೂನ್ ಅವರ ನೇಮಕಾತಿಯನ್ನು ಒಪ್ಪುವುದಿಲ್ಲ ಎಂದು ಎಚ್ಚರಿಕೆ ನೀಡಿತ್ತು.

ಇದೇ ಸಂದರ್ಭದಲ್ಲಿ, ಆಡಳಿತಾರೂಢ ಪಿಪಿಎಂ-ಪಿಎನ್‌ಸಿ ಮೈತ್ರಿಕೂಟ ಸಂಸತ್ತಿನ ಸಭಾಧ್ಯಕ್ಷ ಮೊಹಮದ್ ಅಸ್ಲಾಮ್ ಮತ್ತು ಉಪಾಧ್ಯಕ್ಷ ಅಹ್ಮದ್ ಸಲೀಮ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದೆ ಎನ್ನಲಾಗಿದೆ. ಆಡಳಿತಾರೂಢ ಮೈತ್ರಿಕೂಟದ ಸದಸ್ಯರು ಸಭಾಧ್ಯಕ್ಷರು ಸಂಸತ್ತಿನಲ್ಲಿ ನಡೆಯುತ್ತಿದ್ದ ಕೋಲಾಹಲವನ್ನು ತಡೆಯಲು ಪ್ರಯತ್ನಿಸುವುದು ಬಿಟ್ಟು, ಅದನ್ನು ಉತ್ತೇಜಿಸುವಂತೆ ನಡೆದುಕೊಂಡಿದ್ದು, ಅದನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಅವರು ಸಭಾಧ್ಯಕ್ಷ ಅಸ್ಲಾಮ್ ತನ್ನ ಅಧಿಕೃತ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡು, ಪಕ್ಷಪಾತ ಧೋರಣೆ ತೋರಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಅವಿಶ್ವಾಸ ಗೊತ್ತುವಳಿ ಸಹಜವಾಗಿಯೇ ಸಚಿವರ ನೇಮಕಾತಿಯ ನಿಲುಗಡೆಗೆ ಆಡಳಿತ ಮೈತ್ರಿಕೂಟದ ಪ್ರತಿಕ್ರಿಯೆಯಾಗಿದೆ.

ಹಿಂದೂ ಮಹಾಸಾಗರದಲ್ಲಿ ಕಾರ್ಯತಂತ್ರದ ಮಹತ್ವದ ಸ್ಥಾನ ಹೊಂದಿರುವ ದ್ವೀಪ ಸಮೂಹವಾದ ಮಾಲ್ಡೀವ್ಸ್‌ನಲ್ಲಿ 'ಇಂಡಿಯಾ ಔಟ್' ಎಂಬ ಭಾರತ ವಿರೋಧಿ ನೀತಿ ಮತ್ತು ಚೀನಾ ಪರ ಒಲವು ಪ್ರದರ್ಶಿಸಿ, ಆಡಳಿತಾರೂಢ ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೊಲಿಹ್ ಅವರನ್ನು ಸೋಲಿಸಿ, ಎಂಟನೇ ಅಧ್ಯಕ್ಷರಾಗಿ, ನವೆಂಬರ್ 17, 2023ರಂದು ಮೊಹಮದ್ ಮುಯಿಝು ಅಧಿಕಾರ ಸ್ವೀಕರಿಸಿದರು. ಅದರ ಮರುದಿನವೇ ಮುಯಿಝು ಅವರು ಮಾಲ್ಡೀವ್ಸ್‌ನಲ್ಲಿರುವ 88 ಭಾರತೀಯ ಸೈನಿಕರನ್ನು ಮಾರ್ಚ್ 2024ಕ್ಕೆ ಮುನ್ನ ಹಿಂಪಡೆಯುವಂತೆ ಭಾರತಕ್ಕೆ ಅಧಿಕೃತವಾಗಿ ಮನವಿ ಮಾಡಿದರು. ಅದರೊಡನೆ, ಭಾರತದೊಡನೆ ಕಳೆದ ಹಲವಾರು ವರ್ಷಗಳಿಂದ ಚಾಲ್ತಿಯಲ್ಲಿದ್ದ ಒಪ್ಪಂದಗಳನ್ನೂ ನಿಲುಗಡೆಗೊಳಿಸಿದರು.

ಭಾರತ 2020ರಲ್ಲಿ ಅಂದಿನ ಮಾಲ್ಡೀವಿಯನ್ ಅಧ್ಯಕ್ಷರಾದ ಇಬ್ರಾಹಿಂ ಮೊಹಮದ್ ಸೊಲಿಹ್ ಅವರ ಮನವಿಯಂತೆ ತನ್ನ ಪಡೆಗಳನ್ನು ಮಾಲ್ಡೀವ್ಸ್‌ನಲ್ಲಿ ನಿಯೋಜಿಸಿತ್ತು. ಸೊಲಿಹ್ ಅವರು ಭಾರತ ಪರ ಒಲವುಳ್ಳ ಅಧ್ಯಕ್ಷರಾಗಿದ್ದರು. ಈ ಸೈನಿಕರ ನಿಯೋಜನೆ ಎರಡು ರಾಷ್ಟ್ರಗಳ ನಡುವಿನ ಕಾರ್ಯತಂತ್ರದ ಸಹಯೋಗದ ಭಾಗವಾಗಿದ್ದು, ಜಂಟಿ ತರಬೇತಿ, ಸಾಗರ ಸುರಕ್ಷತೆ ಮತ್ತು ವಿಚಕ್ಷಣಾ ಸಹಯೋಗಗಳನ್ನು ಒಳಗೊಂಡಿತ್ತು.

ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ ತನ್ನ 'ಬೆಲ್ಟ್ ಆ್ಯಂಡ್ ರೋಡ್ ಯೋಜನೆ'ಯ ಮೂಲಕ ತನ್ನ ಪ್ರಭಾವ ಬೀರಲು ಪ್ರಯತ್ನ ನಡೆಸುತ್ತಿದ್ದ ಚೀನಾಗೆ ಮಾಲ್ಡೀವ್ಸ್‌ನಲ್ಲಿ ಭಾರತೀಯ ಸೇನೆಯ ಉಪಸ್ಥಿತಿ ಅಸಮಾಧಾನ ಉಂಟುಮಾಡಿತ್ತು. ಹಿಂದಿನ ಅಧ್ಯಕ್ಷರಾದ ಅಬ್ದುಲ್ಲಾ ಯಮೀನ್ ಅವಧಿಯಲ್ಲಿ ಚೀನಾ ಮಾಲ್ಡೀವ್ಸ್ ಮೂಲಭೂತ ವ್ಯವಸ್ಥೆಗಳಿಗಾಗಿ ಸಾಕಷ್ಟು ಹಣ ಹೂಡಿತ್ತು. ಅಬ್ದುಲ್ಲಾ ಯಮೀನ್ ಅವರು 2018ರಲ್ಲಿ ಸೊಲಿಹ್ ಎದುರು ಚುನಾವಣೆಯಲ್ಲಿ ಸೋತು, ಹಣ ದುರುಪಯೋಗದ ಆರೋಪದಲ್ಲಿ ದೋಷಿಯಾಗಿ, ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದರು.

ಮುಯಿಝು ಅವರ ಬೇಡಿಕೆಗೆ ಅನುಗುಣವಾಗಿ, ಅಂತಿಮವಾಗಿ ಭಾರತ ಮಾಲ್ಡೀವ್ಸ್‌ನಿಂದ ತನ್ನ ಸೇನೆಯನ್ನು ಹಿಂಪಡೆಯಲು ಒಪ್ಪಿಗೆ ಸೂಚಿಸಿತು. ಭಾರತೀಯ ಸೈನಿಕರನ್ನು ಮಾಲ್ಡೀವ್ಸ್ ದ್ವೀಪ ಸಮುಚ್ಚಯದಿಂದ ಹೊರ ಹಾಕುವುದಾಗಿ ಮುಯಿಝು 2023ರ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಗೂ ಮುನ್ನವೇ ಪ್ರಚಾರ ನಡೆಸಿದ್ದರು. ಆದರೆ ಭಾರತದ ವಿರುದ್ಧವಾಗಿರುವ ಮುಯಿಝು ಅವರ ನಡೆಗೆ ಮಾಲ್ಡೀವ್ಸ್ ಸಂಸತ್ತು ಮತ್ತು ನಾಗರಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು. ಎಂಡಿಪಿ ಮತ್ತು ಡೆಮಾಕ್ರಾಟ್ಸ್ ಇತ್ತೀಚೆಗೆ ಜಂಟಿ ಹೇಳಿಕೆಯೊಂದನ್ನು ನೀಡಿದ್ದು, "ಯಾವುದಾದರೂ ಅಭಿವೃದ್ಧಿ ಪರವಾಗಿರುವ ಸಹಯೋಗಿಯಿಂದ ದೂರಾಗುವುದು, ಅದರಲ್ಲೂ ಮಾಲ್ಡೀವ್ಸ್‌ನ ಅತ್ಯಂತ ಸುದೀರ್ಘ ಮಿತ್ರ ರಾಷ್ಟ್ರದಿಂದ ದೂರ ಸರಿಯುವುದು ಮಾಲ್ಡೀವ್ಸ್ ಹಿತಾಸಕ್ತಿಗೆ ತೊಂದರೆ ಉಂಟುಮಾಡಬಹುದು" ಎಂದು ಹೇಳಿದ್ದವು.

ಇದಕ್ಕೆ ಪೂರಕವಾಗಿ, ಮುಯಿಝು ಇತ್ತೀಚೆಗೆ ಚೀನಾದ ಬೇಹುಗಾರಿಕಾ ನೌಕೆಯೊಂದಕ್ಕೆ ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿ ನೆಲೆಸಲು ಅನುಮತಿ ನೀಡಿದ್ದರು. ಚೀನಾದ ಕ್ಸಿಯಾಂಗ್ ಯಾಂಗ್ ಹಾಂಗ್ 3 ನೌಕೆ ಈಗ ಮಾಲ್ಡೀವ್ಸ್ ಕಡೆಗೆ ಪ್ರಯಾಣ ಬೆಳೆಸುತ್ತಿದ್ದು, ಫೆಬ್ರವರಿ 5ರಂದು ಮಾಲೆಗೆ ತಲುಪುವ ನಿರೀಕ್ಷೆಗಳಿವೆ. ಅತ್ಯಾಧುನಿಕ ವಿಚಕ್ಷಣಾ ಸಾಮರ್ಥ್ಯದ ಉಪಕರಣಗಳನ್ನು ಹೊಂದಿರುವ ಈ ನೌಕೆಯ ಚಲನವಲನಗಳನ್ನು ಭಾರತವೂ ಸೂಕ್ಷ್ಮವಾಗಿ ಗಮನಿಸುತ್ತಿದೆ ಎನ್ನಲಾಗಿದೆ. "ಭಾರತೀಯ ನೌಕಾಪಡೆಗೆ ಚೀನಾದ ನೌಕೆಯ ಉಪಸ್ಥಿತಿ ಮತ್ತು ಚಲನವಲನಗಳ ಅರಿವಿದೆ. ನಾವು ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ" ಎಂದು ನೌಕಾಪಡೆಯ ಮೂಲಗಳು ಹೇಳಿವೆ ಎನ್ನಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಚೀನಾ ಮಾಲ್ಡೀವ್ಸ್ ಬಳಿ 'ರಾಜತಾಂತ್ರಿಕ ಮನವಿ' ಒಂದನ್ನು ಸಲ್ಲಿಸಿ, ತನ್ನ ನೌಕೆಯನ್ನು ಸಿಬ್ಬಂದಿಗಳ ಬದಲಾವಣೆ ಮತ್ತು ಮರುಪೂರಣ ಪ್ರಕ್ರಿಯೆಗಾಗಿ ನಿಲ್ಲಿಸಲು ಅನುಮತಿ ಕೋರಿತ್ತು. ಮಾಲ್ಡೀವ್ಸ್ ದ್ವೀಪ ಸಮೂಹ ತನ್ನ ಮಿತ್ರ ರಾಷ್ಟ್ರಗಳ ಹಡಗುಗಳು ಮತ್ತು ನೌಕೆಗಳನ್ನು ಸದಾ ಸ್ವಾಗತಿಸುತ್ತಾ ಬಂದಿದೆ ಎಂದು ವರದಿಗಳು ಹೇಳಿವೆ. ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯ ಈ ಕುರಿತು ಹೇಳಿಕೆ ನೀಡಿದ್ದು, ಚೀನಾ ಮಾಲ್ಡೀವ್ಸ್ ಬಳಿ ರಾಜತಾಂತ್ರಿಕ ಮನವಿ ಸಲ್ಲಿಸಿದ್ದು, ಬಂದರಿಗೆ ಆಗಮಿಸಲು ಅವಶ್ಯಕ ಪ್ರಕ್ರಿಯೆಗಳನ್ನು ಪೂರೈಸಿದೆ ಎಂದಿದೆ.

ಮುಯಿಝು ಪಾಲಿಗೆ ಇನ್ನೊಂದು ಆಘಾತ ಎಂಬಂತೆ, ಈ ವರ್ಷ ಜನವರಿಯಲ್ಲಿ ನಡೆದ ಮಾಲೆ ಮೇಯರ್ ಚುನಾವಣೆಯಲ್ಲಿ ಎಂಡಿಪಿ ಅಭ್ಯರ್ಥಿ ಆದಮ್ ಅಜೀಮ್ ಅವರು ಪಿಎನ್‌ಸಿಯ ಆಯಿಷತ್ ಅಜಿ಼ಮಾ ಶಕೂರ್ ವಿರುದ್ಧ ಭಾರೀ ಗೆಲುವ ದಾಖಲಿಸಿದ್ದಾರೆ.

ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News