ಚೀನೀ ಡ್ರ್ಯಾಗನ್ ಕೆಂಗಣ್ಣಿಗೆ ಮಣಿಯದೆ ಫಿಲಿಪೈನ್ಸ್ ಮತ್ತು ಆಗ್ನೇಯ ಏಷ್ಯಾ ಜೊತೆ ಸಂಬಂಧ ವೃದ್ಧಿಗೆ ಭಾರತದ ಹೆಜ್ಜೆ

ಜೂನ್ ತಿಂಗಳಲ್ಲಿ ಭಾರತ ಮತ್ತು ಫಿಲಿಪೈನ್ಸ್ ದೇಶಗಳ ರಾಜತಾಂತ್ರಿಕರ ಮಟ್ಟರ ಮಾತುಕತೆ ನಡೆದಿದ್ದು, ಅದರಲ್ಲಿ ಭಾರತ ದಕ್ಷಿಣ ಚೀನಾ ಸಮುದ್ರದ ಮಧ್ಯಸ್ಥಿಕೆ 2016 ಒಪ್ಪಂದಲ್ಲಿ ತನ್ನ ಪಾತ್ರವನ್ನು ತಿದ್ದುಪಡಿ ಮಾಡಿದ್ದು, ಚೀನಾದೆದುರು ಫಿಲಿಪೈನ್ಸ್ ಪ್ರಾದೇಶಿಕ ಹಕ್ಕುಗಳನ್ನು ಬೆಂಬಲಿಸುತ್ತದೆ. ಭಾರತ ಪ್ರಸ್ತುತ ಸಮಯದಲ್ಲಿ ಆಗ್ನೇಯ ಏಷ್ಯಾದ ರಾಷ್ಟ್ರಗಳೊಡನೆ ತನ್ನ ಭದ್ರತಾ ಸಹಯೋಗವನ್ನು ಹೆಚ್ಚಿಸಲು ಪ್ರಯತ್ನ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಒಪ್ಪಂದದ ಕುರಿತ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದೆ. 

Written by - Girish Linganna | Edited by - Krishna N K | Last Updated : Dec 20, 2023, 05:14 PM IST
  • ಡಿಸೆಂಬರ್ 10ರಂದು ಸೌತ್ ಚೈನಾ ಸಮುದ್ರದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿತು.
  • ಚೀನಾದ ಕೋಸ್ಟ್ ಗಾರ್ಡ್ ಹಡಗೊಂದು ಫಿಲಿಪೈನ್ಸ್‌ಗೆ ಸೇರಿದ ಸಾಗಾಣಿಕಾ ಹಡಗೊಂದನ್ನು ತಡೆದಿತ್ತು.
  • ಅದಾದ ಕೆಲ ಸಮಯದಲ್ಲೇ ಭಾರತೀಯ ನೌಕಾಪಡೆಯ ಯುದ್ಧನೌಕೆಯೊಂದು ಫಿಲಿಪೈನ್ಸ್‌ಗೆ ಆಗಮಿಸಿತು.
ಚೀನೀ ಡ್ರ್ಯಾಗನ್ ಕೆಂಗಣ್ಣಿಗೆ ಮಣಿಯದೆ ಫಿಲಿಪೈನ್ಸ್ ಮತ್ತು ಆಗ್ನೇಯ ಏಷ್ಯಾ ಜೊತೆ ಸಂಬಂಧ ವೃದ್ಧಿಗೆ ಭಾರತದ ಹೆಜ್ಜೆ title=

ಡಿಸೆಂಬರ್ 10ರಂದು ಸೌತ್ ಚೈನಾ ಸಮುದ್ರದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿತು. ನಿರ್ದಿಷ್ಟವಾಗಿ, ರೆನಾಯ್ ರೀಫ್ ಮತ್ತು ಸ್ಕಾರ್‌ಬೋರೋ ಶೋಲ್ ಪ್ರದೇಶದಲ್ಲಿ ಈ ಸಮಸ್ಯೆ ತಲೆದೋರಿದ್ದು, ಚೀನಾದ ಕೋಸ್ಟ್ ಗಾರ್ಡ್ ಹಡಗೊಂದು ಫಿಲಿಪೈನ್ಸ್‌ಗೆ ಸೇರಿದ ಸಾಗಾಣಿಕಾ ಹಡಗೊಂದನ್ನು ತಡೆದಿತ್ತು. ಅದಾದ ಕೆಲ ಸಮಯದಲ್ಲೇ ಭಾರತೀಯ ನೌಕಾಪಡೆಯ ಯುದ್ಧನೌಕೆಯೊಂದು ಫಿಲಿಪೈನ್ಸ್‌ಗೆ ಆಗಮಿಸಿತು. ಡಿಸೆಂಬರ್ 12ರಂದು, ಭಾರತೀಯ ನೌಕಾಪಡೆಯ ಆ್ಯಂಟಿ ಸಬ್‌ಮರೀನ್ ಯುದ್ಧ ಸಾಮರ್ಥ್ಯ ಹೊಂದಿರುವ ಕಾರ್ವೆಟ್ ಆದ ಐಎನ್ಎಸ್ ಕ್ಯಾಡ್ಮಟ್ ಮನಿಲಾಗೆ ತೆರಳಿದ್ದು, ತಕ್ಷಣವೇ ಫಿಲಿಪೈನ್ಸ್ ನೌಕಾಪಡೆಯೊಡನೆ ಜಂಟಿ ಅಭ್ಯಾಸ ಕೈಗೊಂಡಿತು.

ಇದು ಭಾರತ ಮತ್ತು ಫಿಲಿಪೈನ್ಸ್ ನಡುವಿನ ಸಾಗರ ಸಂಬಂಧ ಹೆಚ್ಚು ಗಟ್ಟಿಯಾಗುತ್ತಿದೆ ಎಂಬುದಕ್ಕೆ ಸಂಕೇತವಾಗಿದೆ. ಈ ಯುದ್ಧ ನೌಕೆ ಮನಿಲಾಗೆ ತೆರಳಿರುವುದು ಈ ಪ್ರದೇಶದಲ್ಲಿ ಸಾಗರದ ಶಾಂತಿಯನ್ನು ಕಾಪಾಡಿಕೊಳ್ಳುವಲ್ಲಿ ಭಾರತ ಬದ್ಧವಾಗಿದೆ ಎಂಬುದನ್ನು ಸಾಬೀತುಪಡಿಸಿದೆ.

ಇದನ್ನೂ ಓದಿ:ಭೂಮಿಯ ಕಂಪನಕ್ಕೆ 110ಕ್ಕೂ ಹೆಚ್ಚು ಜನರು ಬಲಿ

ಫಿಲಿಪೈನ್ಸ್ ಭಾರತದಿಂದ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಖರೀದಿಸಿರುವುದು ದಕ್ಷಿಣ ಚೀನಾ ಸಮುದ್ರಕ್ಕೆ ಸಂಬಂಧಿಸಿದಂತೆ ಮನಿಲಾದ ಕಾರ್ಯತಂತ್ರದ ನಡೆಯನ್ನು ತೋರುತ್ತದೆ. ಫಿಲಿಪೈನ್ಸ್‌ಗೆ ಬ್ರಹ್ಮೋಸ್ ಖರೀದಿಸಲು ಸಾಲ ಸೌಲಭ್ಯ ಒದಗಿಸುವ ಜೊತೆಗೆ, ಫಿಲಿಪೈನ್ಸ್ ಜೊತೆಗಿನ ಭದ್ರತಾ ಸಹಯೋಗವನ್ನು ವೃದ್ಧಿಸಲು ನವದೆಹಲಿ ರಕ್ಷಣಾ ತಂಡವನ್ನು ಕಳುಹಿಸಲು ಉದ್ದೇಶಿಸಿದೆ.

ಜೂನ್ ತಿಂಗಳಲ್ಲಿ ಭಾರತ ಮತ್ತು ಫಿಲಿಪೈನ್ಸ್ ದೇಶಗಳ ರಾಜತಾಂತ್ರಿಕರ ಮಟ್ಟರ ಮಾತುಕತೆ ನಡೆದಿದ್ದು, ಅದರಲ್ಲಿ ಭಾರತ ದಕ್ಷಿಣ ಚೀನಾ ಸಮುದ್ರದ ಮಧ್ಯಸ್ಥಿಕೆ 2016 ಒಪ್ಪಂದಲ್ಲಿ ತನ್ನ ಪಾತ್ರವನ್ನು ತಿದ್ದುಪಡಿ ಮಾಡಿದ್ದು, ಚೀನಾದೆದುರು ಫಿಲಿಪೈನ್ಸ್ ಪ್ರಾದೇಶಿಕ ಹಕ್ಕುಗಳನ್ನು ಬೆಂಬಲಿಸುತ್ತದೆ. ಭಾರತ ಪ್ರಸ್ತುತ ಸಮಯದಲ್ಲಿ ಆಗ್ನೇಯ ಏಷ್ಯಾದ ರಾಷ್ಟ್ರಗಳೊಡನೆ ತನ್ನ ಭದ್ರತಾ ಸಹಯೋಗವನ್ನು ಹೆಚ್ಚಿಸಲು ಪ್ರಯತ್ನ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಒಪ್ಪಂದದ ಕುರಿತ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದೆ. ಈ ಒಪ್ಪಂದ ನೈನ್ ಡ್ಯಾಶ್ ಲೈನ್ ಸೇರಿದಂತೆ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಹಕ್ಕುಗಳನ್ನು ವಿರೋಧಿಸಿದ್ದು, ಪ್ರಾದೇಶಿಕ ವಿವಾದದಲ್ಲಿ ಫಿಲಿಪೈನ್ಸ್‌ಗೆ ಬೆಂಬಲ ಒದಗಿಸಿದೆ.

ಇದನ್ನೂ ಓದಿ:ಭಾರತ - ಅಮೆರಿಕಾ ಸಂಬಂಧದ ಮೇಲೆ ಪನ್ನುನ್ ಪ್ರಕರಣದ ಕಾರ್ಮೋಡ: ಭಾರತ ಭೇಟಿಯನ್ನು ರದ್ದುಗೊಳಿಸಿದ ಅಧ್ಯಕ್ಷ ಬಿಡೆನ್

ಜೂನ್ 27ರಿಂದ 30ರ ತನಕ ನವದೆಹಲಿಯಲ್ಲಿ 5ನೇ ಇಂಡಿಯಾ - ಫಿಲಿಪೈನ್ಸ್ ದ್ವಿಪಕ್ಷೀಯ ಸಹಕಾರದ ಜಂಟಿ ಸಮಿತಿಯ ಸಭೆ ನಡೆದಿದ್ದು, ಫಿಲಿಪೈನ್ಸ್ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಎನ್ರಿಕ್ ಮನಾಲೊ ಮತ್ತು ಭಾರತದ ವಿದೇಶಾಂಗ ಸಚಿವರಾದ ಸುಬ್ರಮಣ್ಯಂ ಜೈಶಂಕರ್ ಅವರು ಭೇಟಿಯಾಗಿ, ಎರಡೂ ರಾಷ್ಟ್ರಗಳ ನಡುವಿನ ವಿವಿಧ ವಿಚಾರಗಳನ್ನು ಚರ್ಚಿಸಿದರು. ಭಾರತ 2016ರ ಒಪ್ಪಂದಕ್ಕೆ ಸಂಬಂಧಿಸಿದಂತೆ ತನ್ನ ನೂತನ ನಿಲುವನ್ನು ಈ ಭೇಟಿಯ ವೇಳೆಯಲ್ಲಿ ತಿಳಿಸಿತು. ಈ ಭೇಟಿಯ ಸಂದರ್ಭದಲ್ಲಿ ಭಾರತ ತನ್ನ ಹೇಳಿಕೆಯನ್ನು ಬಿಡುಗಡೆಗೊಳಿಸಿತ್ತು.

ಈ ಸಭೆಯ ಬಳಿಕ ನೀಡಲಾದ ಹೇಳಿಕೆಯ ಪ್ರಕಾರ, ಎರಡೂ ರಾಷ್ಟೃಗಳ ರಾಜತಾಂತ್ರಿಕರು ಇಂಡೋ ಪೆಸಿಫಿಕ್ ಪ್ರದೇಶವನ್ನು ಸ್ವತಂತ್ರ, ಮುಕ್ತ ಮತ್ತು ಎಲ್ಲರನ್ನೂ ಒಳಗೊಂಡಂತೆ ಕಾರ್ಯಾಚರಿಸುವ ಕುರಿತು ಪರಸ್ಪರ ಆಸಕ್ತಿಗಳನ್ನು ವ್ಯಕ್ತಪಡಿಸಿದರು. ಈ ಹೇಳಿಕೆಯಲ್ಲಿ ಸಶಕ್ತ, ಯುವ ಪ್ರಜಾಪ್ರಭುತ್ವವನ್ನು ಒಳಗೊಂಡಿರುವ ಭಾರತ - ಫಿಲಿಪೈನ್ಸ್ ಸಂಬಂಧ ಸಾಕಷ್ಟು ವೃದ್ಧಿಯಾಗುತ್ತಿದೆ ಎನ್ನಲಾಗಿದ್ದು, ಎರಡು ರಾಷ್ಟ್ರಗಳ ಆರ್ಥಿಕತೆಯೂ ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುತ್ತಿವೆ ಎನ್ನಲಾಗಿದೆ.

ಭಾರತ ಫಿಲಿಪೈನ್ಸ್ ತಮ್ಮ ಜಂಟಿ ಹೇಳಿಕೆಯಲ್ಲಿ ಅಂತಾರಾಷ್ಟ್ರೀಯ ಕಾನೂನುಗಳು ಮತ್ತು ನಿಯಮಾವಳಿಗಳಿಗೆ ಬೆಲೆ ಕೊಡಬೇಕು ಎಂದು ಒತ್ತಿ ಹೇಳಿದ್ದು, ವಿವಾದಗಳನ್ನು ಪರಸ್ಪರ ಶಾಂತಿಯುತವಾಗಿ ಸರಿಪಡಿಸಿಕೊಳ್ಳುವುದಕ್ಕೆ ಬೆಂಬಲ ನೀಡಬೇಕು ಎಂದಿವೆ. ಭಾರತ ಮತ್ತು ಫಿಲಿಪೈನ್ಸ್ ದೇಶಗಳು ಈ ಹೇಳಿಕೆಯಲ್ಲಿ ಯುನೈಟೆಡ್ ನೇಶನ್ಸ್ ಕನ್ವೆನ್ಷನ್ ಆನ್ ದ ಲಾ ಆಫ್ ದ ಸೀ (ಯುಎನ್‌ಸಿಎಲ್ಒಎಸ್) ಮತ್ತು ದಕ್ಷಿಣ ಚೀನಾ ಸಮುದ್ರಕ್ಕೆ ಸಂಬಂಧಿಸಿದಂತೆ 2016ರ ನಿಲುವುಗಳನ್ನು ಉಲ್ಲೇಖಿಸಿವೆ.

ಮನಿಲಾಗೆ ಭಾರತದ ರಾಯಭಾರಿಯಾಗಿರುವ ಶಂಭು ಕುಮಾರನ್ ಅವರು ಜುಲೈ 12ರಂದು ಮಧ್ಯಸ್ಥಿಕೆ ಒಪ್ಪಂದದ ಏಳನೆ ವರ್ಷಾಚರಣೆಯ ಸಂದರ್ಭದಲ್ಲಿ ಹೇಳಿಕೆಯೊಂದನ್ನು ನೀಡಿದ್ದು, ಅದು ನವದೆಹಲಿಯ ನಿಲುವನ್ನು ಪ್ರದರ್ಶಿಸಿದೆ. ಶಂಭು ಕುಮಾರನ್ ಅವರು, ಎಲ್ಲ ರಾಷ್ಟ್ರಗಳು ಅಂತಾರಾಷ್ಟ್ರೀಯ ನಿಯಮಗಳನ್ನು ಎತ್ತಿ ಹಿಡಿಯುವ ಜವಾಬ್ದಾರಿ ಹೊಂದಿದ್ದರೂ, ದೊಡ್ಡ ರಾಷ್ಟ್ರಗಳು ಅಂತಾರಾಷ್ಟ್ರೀಯ ಕಾನೂನುಗಳಿಗೆ ಗೌರವ ತೋರುವ ಹೆಚ್ಚಿನ ಜವಾಬ್ದಾರಿ ಹೊಂದಿವೆ ಎಂದಿದ್ದಾರೆ.

ಇದನ್ನೂ ಓದಿ:China Earthquake: ಚೀನಾದಲ್ಲಿ ಪ್ರಬಲ ಭೂಕಂಪ, 110ಕ್ಕೂ ಹೆಚ್ಚು ಮಂದಿ ಮೃತ, ಹಲವರಿಗೆ ಗಾಯ

ಭಾರತ ತನ್ನ ನಿಲುವನ್ನು ಬದಲಾಯಿಸುವ ಮೊದಲು, ಈ ಒಪ್ಪಂದದ ಫಲಿತಾಂಶವನ್ನು ಒಪ್ಪಿಕೊಂಡಿತ್ತು. ಇನ್ನೊಂದೆಡೆ, ಚೀನಾ - ಭಾರತದ ಗಡಿ ಉದ್ವಿಗ್ನತೆಗಳ ಕಾರಣದಿಂದ ಭಾರತ ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ಈ ಪ್ರದೇಶದಲ್ಲಿ ಫಿಲಿಪೈನ್ಸ್ ನಂತಹ ರಾಷ್ಟ್ರಗಳನ್ನು ಬೆಂಬಲಿಸುತ್ತಾ ಬಂದಿತ್ತು. ಅದರೊಡನೆ, ಇಂಡೋ - ಪೆಸಿಫಿಕ್ ಪ್ರಾಂತ್ಯವನ್ನು ಮುಕ್ತ ಮತ್ತು ಸ್ವತಂತ್ರವಾಗಿಡುವ ಕ್ವಾಡ್ ಒಕ್ಕೂಟದಲ್ಲಿ ಭಾರತವೂ ಭಾಗವಾಗಿತ್ತು.

ಭಾರತ ಈ ಮೊದಲು ಗಡಿ ಪ್ರದೇಶದಲ್ಲಿ ಮತ್ತು ಹಿಂದೂ ಮಹಾಸಾಗರದ ಪ್ರಾಂತ್ಯದಲ್ಲಿ ತನ್ನ ಭದ್ರತಾ ಹಿತಾಸಕ್ತಿಗಳಿಗೆ ಚೀನಾ ಅತಿದೊಡ್ಡ ಅಪಾಯ ಎಂದು ತಾನು ಗುರುತಿಸಿರುವುದಾಗಿ ಮೊದಲೇ ಹೇಳಿಕೆ ನೀಡಿತ್ತು. ಭಾರತ ಈ ಮೊದಲು ಅಲಿಪ್ತ ನಿಲುವನ್ನು ಒಪ್ಪಿಕೊಂಡಿದ್ದು, ಪ್ರಮುಖ ಜಾಗತಿಕ ಶಕ್ತಿಗಳ ನಡುವಿನ ಸ್ಪರ್ಧೆಯಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿತ್ತು.

ತಜ್ಞರ ಪ್ರಕಾರ, ಭಾರತ ಏನಾದರೂ 2016ರ ಮಧ್ಯಸ್ಥಿಕೆ ನ್ಯಾಯಮಂಡಳಿಯ ನಿರ್ಧಾರವನ್ನು ಬೆಂಬಲಿಸುವುದಾದರೆ, ಅದು ಯಾವುದೇ ಪ್ರಬಲ ರಾಷ್ಟ್ರವನ್ನು ಬೆಂಬಲಿಸದೆ, ಅಂತಾರಾಷ್ಟ್ರೀಯ ಕಾನೂನನ್ನು ಬೆಂಬಲಿಸಬಹುದು. ಈ ಮೂಲಕ ಭಾರತ ಇದೇ ದೃಷ್ಟಿಯಲ್ಲಿ ತನ್ನ ಭದ್ರತಾ ಹಿತಾಸಕ್ತಿಗಳ ಗುರಿಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. 2016ರ ಮಧ್ಯಸ್ಥಿಕೆ ನ್ಯಾಯಮಂಡಳಿಯ ತೀರ್ಪಿನಿಂದ ಪ್ರಯೋಜನ ಪಡೆಯುವ ಎಲ್ಲ ರಾಷ್ಟ್ರಗಳೂ ಭಾರತದಿಂದ ರಕ್ಷಣಾ ಉಪಕರಣಗಳ, ಅದರಲ್ಲೂ ಬ್ರಹ್ಮೋಸ್ ಕ್ಷಿಪಣಿಯ ಸಂಭಾವ್ಯ ಖರೀದಿದಾರ ರಾಷ್ಟ್ರಗಳಾಗಿವೆ.

ಭಾರತ ಈಗಾಗಲೇ ಆಗ್ನೇಯ ಏಷ್ಯಾದಲ್ಲಿ ತನ್ನ ಪ್ರಯತ್ನಗಳನ್ನು ವೃದ್ಧಿಸಿದ್ದರೂ, ದಕ್ಷಿಣ ಚೀನಾ ಸಮುದ್ರ ಪ್ರಾಂತ್ಯದಲ್ಲಿ ಭದ್ರತಾ ಪರಿಸ್ಥಿತಿ ಹದಗೆಡದಂತೆ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಸಂಯಮ ಪ್ರದರ್ಶಿಸಿದೆ. ತಾನು ಈ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಮಧ್ಯ ಪ್ರವೇಶ ನಡೆಸುತ್ತಿದ್ದೇನೆ ಎಂಬ ಭಾವನೆ ಮೂಡದಂತೆ ಮಾಡಲು ಭಾರತ ಸರ್ಕಾರ ಹೆಚ್ಚಿನ ಎಚ್ಚರಿಕೆ ತೆಗೆದುಕೊಳ್ಳುತ್ತಿದೆ.

ಇದನ್ನೂ ಓದಿ: Viral Video: ಈ ದೇಶದಲ್ಲಿದೆ ದೇವರ ಕಣ್ಣು.. ನಿಗೂಢ ಆಕಾರವಿರುವ ವಿಡಿಯೋ ಎಲ್ಲೆಡೆ ವೈರಲ್!

ಒಂದು ವೇಳೆ ಭಾರತ ಏನಾದರೂ ದಕ್ಷಿಣ ಚೀನಾ ಸಮುದ್ರದಲ್ಲಿ ಹೆಚ್ಚು ಆಕ್ರಮಣಕಾರಿ ಮಿಲಿಟರಿ ಕ್ರಮಗಳನ್ನು ಕೈಗೊಂಡರೆ, ಆಗ ಅದನ್ನು ಹಿಂದೂ ಮಹಾಸಾಗರದಲ್ಲಿ ಚೀನಾದ ನಡೆಗೆ ಹೋಲಿಸಬಹುದು. ನವದೆಹಲಿ ಇತ್ತೀಚೆಗೆ ಮನಿಲಾಗೆ ಬೆಂಬಲ ನೀಡಿರುವುದನ್ನು ಮತ್ತು 2016ರ ಅಂತಾರಾಷ್ಟ್ರೀಯ ನ್ಯಾಯಮಂಡಳಿಯ ತೀರ್ಪನ್ನು ಬೆಂಬಲಿಸುವುದನ್ನು ಚೀನಾ ಭಾರತ ತನ್ನ ಸಹನೆಯ ಮಟ್ಟವನ್ನು ಪರೀಕ್ಷಿಸಲು ಕೈಗೊಂಡಿರುವ ನಿರ್ಧಾರ ಎಂದು ಭಾವಿಸಿದೆ. ಆದರೆ, ಕೇವಲ ಇಷ್ಟು ಮಾತ್ರಕ್ಕೇ ಫಿಲಿಪೈನ್ಸ್ ನಂತಹ ಆಗ್ನೇಯ ಏಷ್ಯಾದ ದೇಶಗಳಿಗೆ ಭಾರತ ತನ್ನ ನೆರವನ್ನು ಹೆಚ್ಚಿಸಲಿದೆ ಮತ್ತು ಅವುಗಳೊಡನೆ ಕಾರ್ಯತಂತ್ರದ ಸಹಯೋಗ ಸಾಧಿಸಲಿದೆ ಎನ್ನಲು ಸಾಧ್ಯವಿಲ್ಲ.

ಇತ್ತೀಚಿನ ಸಮಯದಲ್ಲಿ, ನವದೆಹಲಿ ವಿಯೆಟ್ನಾಂ ಮತ್ತು ಫಿಲಿಪೈನ್ಸ್ ನಂತಹ ಆಗ್ನೇಯ ಏಷ್ಯಾದ ರಾಷ್ಟ್ರಗಳೊಡನೆ ಭದ್ರತಾ ಸಂಬಂಧವನ್ನು ಗಟ್ಟಿಗೊಳಿಸುವ ಕ್ರಮಗಳನ್ನು ಕೈಗೊಂಡಿದೆ. ಅಸೋಸಿಯೇಶನ್ ಆಫ್ ಸೌತ್ ಈಸ್ಟ್ ಏಷ್ಯನ್ ನೇಶನ್ಸ್ (ಆಸಿಯಾನ್) ಸಂಘಟನೆ ಮತ್ತು ಭಾರತ 2022ರಲ್ಲಿ ಮಹತ್ವದ ಕಾರ್ಯತಂತ್ರದ ಸಹಯೋಗವನ್ನು ಆರಂಭಿಸಿವೆ. ಇವೆರಡರ ನಡುವಿನ ಆರಂಭಿಕ ಸಾಗರ ಸಮರಾಭ್ಯಾಸ 2023ರಲ್ಲಿ ಆರಂಭಗೊಂಡಿತು.

ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News