'ಮೇಲ್ಸೇತುವೆ ರಸ್ತೆ ನಿರ್ಮಾಣಕ್ಕಾಗಿ 300 ಕೋಟಿ ರೂ.ಬಿಡುಗಡೆಗೆ ಕೇಂದ್ರ ತಾತ್ವಿಕ ಒಪ್ಪಿಗೆ'

ನಗರದ ಪಿಬಿ ರಸ್ತೆಯ ಹಳೆ ಬಸ್ ನಿಲ್ದಾಣದಿಂದ ಬಿಡ್ನಾಳವರೆಗೆ ಮೇಲ್ಸೇತುವೆ ರಸ್ತೆ ನಿರ್ಮಿಸಿ, ಬೆಂಗಳೂರು ಮಾರ್ಗದಲ್ಲಿ ಸುಗಮ ಸಂಚಾರ ಕಲ್ಪಿಸುವ 300 ಕೋಟಿ ರೂ. ಪ್ರಸ್ತಾವನೆಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ರಾಜ್ಯ ಸರ್ಕಾರ 50 ಲಕ್ಷ ರೂ.ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. 

Last Updated : Jul 31, 2022, 01:35 AM IST
  • ಇಲ್ಲಿನ ಸರ್ಕ್ಯೂಟ್ ಹೌಸ್‌ನಲ್ಲಿ ಇಂದು ನಗರದ ವಿವಿಧ ಅಭಿವೃದ್ಧಿ ಕಾರ್ಯಗಳ ಪರಿಶೀಲನೆಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
'ಮೇಲ್ಸೇತುವೆ ರಸ್ತೆ ನಿರ್ಮಾಣಕ್ಕಾಗಿ 300 ಕೋಟಿ ರೂ.ಬಿಡುಗಡೆಗೆ ಕೇಂದ್ರ ತಾತ್ವಿಕ ಒಪ್ಪಿಗೆ' title=
Photo Courtsey: Facebook

ಹುಬ್ಬಳ್ಳಿ : ನಗರದ ಪಿಬಿ ರಸ್ತೆಯ ಹಳೆ ಬಸ್ ನಿಲ್ದಾಣದಿಂದ ಬಿಡ್ನಾಳವರೆಗೆ ಮೇಲ್ಸೇತುವೆ ರಸ್ತೆ ನಿರ್ಮಿಸಿ, ಬೆಂಗಳೂರು ಮಾರ್ಗದಲ್ಲಿ ಸುಗಮ ಸಂಚಾರ ಕಲ್ಪಿಸುವ 300 ಕೋಟಿ ರೂ. ಪ್ರಸ್ತಾವನೆಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ರಾಜ್ಯ ಸರ್ಕಾರ 50 ಲಕ್ಷ ರೂ.ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. 

ಇಲ್ಲಿನ ಸರ್ಕ್ಯೂಟ್ ಹೌಸ್‌ನಲ್ಲಿ ಇಂದು ನಗರದ ವಿವಿಧ ಅಭಿವೃದ್ಧಿ ಕಾರ್ಯಗಳ ಪರಿಶೀಲನೆಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ನಗರದಲ್ಲಿ ಫ್ಲೈ ಓವರ್ ರಸ್ತೆ ನಿರ್ಮಾಣ ಯೋಜನೆಯಲ್ಲಿ ಬೆಂಗಳೂರು ಮಾರ್ಗದ ಬಿಡ್ನಾಳವರೆಗೆ ವಿಸ್ತರಿಸಲು ಉದ್ದೇಶಿಸಿರುವ ಪ್ರಸ್ತಾವನೆಗೆ 300 ಕೋಟಿ ರೂ. ಬಿಡುಗಡೆ ಮಾಡಲು ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಮಂತ್ರಾಲಯ ತಾತ್ವಿಕ ಒಪ್ಪಿಗೆ ನೀಡಿದೆ. ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಹಿರಿಯ ಅಧಿಕಾರಿಗಳು 15 ದಿನಗಳೊಳಗೆ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ವಿಸ್ತೃತ ಯೋಜನಾ ವರದಿ ಸಲ್ಲಿಸಬೇಕು ಎಂದರು. 

ಹುಬ್ಬಳ್ಳಿ ಧಾರವಾಡ ಅವಳಿ ನಗರದ ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡಲು ರಾಮನಗರ- ಅಳ್ನಾವರ- ಧಾರವಾಡ- ಕುಸುಗಲ್ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಿ ಅಭಿವೃದ್ಧಿ ಪಡಿಸಲು ಭಾರತ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇದರ ಸಮೀಕ್ಷೆಗಾಗಿ ಕೆಆರ್‌ಡಿಸಿಎಲ್ ಮೂಲಕ ಗುತ್ತಿಗೆ ಪಡೆದ ವ್ಯಕ್ತಿ ಕಾರ್ಯ ಪೂರ್ಣಗೊಳಿಸದೇ ಇರುವುದರಿಂದ ಸದ್ಯ ಬ್ಯಾಂಕ್ ಆಫ್ ಬರೋಡಾ ಆ ಮಾರ್ಗದಲ್ಲಿ ಟೋಲ್ ಸಂಗ್ರಹ ಮಾಡುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಉನ್ನತ ಮಟ್ಟದ ಸಭೆ ಕರೆಯಲು ರಾಜ್ಯದ ಲೋಕೋಪಯೋಗಿ ಸಚಿವರಾದ ಸಿ.ಸಿ. ಪಾಟೀಲ ಅವರಿಗೆ ಕೇಂದ್ರ ಸಚಿವ ಜೋಶಿ ತಿಳಿಸಿದರು.

ಇದನ್ನೂ ಓದಿ-Infinix Smart 6 Plus: ಕಡಿಮೆ ಬೆಲೆಯ ಜಬರ್ದಸ್ತ್ ಸ್ಮಾರ್ಟ್‌ಫೋನ್, ಬೆಲೆ ಎಷ್ಟು ಗೊತ್ತಾ? 

ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳ ಅನುಷ್ಠಾನ ಮತ್ತು ನಿರ್ವಹಣೆ ಸಮರ್ಪಕವಾಗಿ ನಡೆಯಬೇಕು. ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವ ವಾಹನಗಳಿಗೆ ಅಳವಡಿಸಿರುವ ಆರ್‌ಎಫ್‌ಐಡಿ ಟ್ಯಾಗ್ ವ್ಯವಸ್ಥೆ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಇದರ ಬದಲಿಗೆ ಕಸ ಸಂಗ್ರಹಿಸುವ ಬಕೆಟ್‌ಗಳಿಗೆ ಟ್ಯಾಗ್ ಅಳವಡಿಸಿದರೆ ನಿಖರವಾಗಿ ಕಾರ್ಯ ಅನುಷ್ಠಾನವಾಗುತ್ತದೆ. ಈ ನಿಟ್ಟಿನಲ್ಲಿ ಸ್ಥಳೀಯ ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಯೋಜನೆ ಅಧಿಕಾರಿಗಳು ತ್ವರಿತ ನಿರ್ಣಯಗಳನ್ನು ಕೈಗೊಳ್ಳಬೇಕು. ನಗರದ ಅಭಿವೃದ್ಧಿ ಕಾರ್ಯಗಳ ಪರಿಣಾಮಗಳ ಬಗ್ಗೆ ಬಾಹ್ಯ ಏಜೆನ್ಸಿ ಮೂಲಕ ರ‍್ಯಾಂಡಮ್ ಮೌಲ್ಯಮಾಪನ ಮಾಡಿಸಬೇಕು. ನಗರದ ಬೀದಿ ದೀಪಗಳ ಅಳವಡಿಕೆ ಕಾರ್ಯದ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ಕೇಂದ್ರ ಸಚಿವರು ಮಹಾನಗರ ಪಾಲಿಕೆ ವಿದ್ಯುತ್ ವಿಭಾಗದ ಸಿಬ್ಬಂದಿಯನ್ನು ಚುರುಕುಗೊಳಿಸಬೇಕು. ಎಲ್‌ಇಡಿ ಬೀದಿ ದೀಪ ಅಳವಡಿಕೆಯ ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿ ಪ್ರಾರಂಭವಾಗುವವರೆಗೂ ಜಿಲ್ಲಾಧಿಕಾರಿಗಳು, ಮೇಯರ್, ಆಯುಕ್ತರು ನಿರಂತರವಾಗಿ ಪ್ರತಿ ವಾರ ಸಭೆ ನಡೆಸಬೇಕು ಎಂದು ಸೂಚಿಸಿದರು. ಅವಳಿ ನಗರದಲ್ಲಿ ಸರಬರಾಜು ಆಗುತ್ತಿರುವ ಕುಡಿಯುವ ನೀರಿನಲ್ಲಿ ಇತರೆ ಕೊಳವೆ ಮಾರ್ಗದ ನೀರು ಮಿಶ್ರಣವಾಗುತ್ತಿರುವ ಬಗ್ಗೆ ಸಾರ್ವಜನಿಕರು, ಚುನಾಯಿತ ಪ್ರತಿನಿಧಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕುಡಿಯುವ ನೀರು ಮಲಿನವಾಗದಂತೆ ಎಚ್ಚರ ವಹಿಸಬೇಕು ಎಂದರು. 

ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಪ್ರತಿಕ್ರಿಯೆ ನೀಡಿ, ಹುಬ್ಬಳ್ಳಿ ಹಳೆ ಬಸ್ ನಿಲ್ದಾಣದಿಂದ ಬಿಡ್ನಾಳವರೆಗೆ ಮೇಲ್ಸೇತುವೆ ರಸ್ತೆ ನಿರ್ಮಿಸುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ 300 ಕೋಟಿ ರೂ. ನೀಡಲು ಒಪ್ಪಿರುವುದು ಸಂತಸ ತಂದಿದೆ. ವಿಸ್ತೃತ ಯೋಜನಾ ವರದಿ ತಯಾರಿಕೆಗೆ ರಾಜ್ಯದ ಲೋಕೋಪಯೋಗಿ ಇಲಾಖೆಯ 50 ಲಕ್ಷ ರೂ. ನೀಡಲಿದೆ. ರಸ್ತೆ ಕಾಮಗಾರಿ ಸಂದರ್ಭದಲ್ಲಿ ವಿವಿಧ ಕೊಳವೆ ಮಾರ್ಗ, ಓಎಫ್‌ಸಿ ಮತ್ತಿತರ ಕೇಬಲ್ ಅಳವಡಿಸುವ ಇಲಾಖೆ ಅಥವಾ ಏಜೆನ್ಸಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ ಪದೇ ಪದೇ ರಸ್ತೆಗಳಿಗೆ ಹಾನಿಯಾಗುವುದನ್ನು ತಪ್ಪಿಸಬೇಕು ಎಂದು ಸೂಚಿಸಿದರು. 

ಗಣಿ, ಭೂ ವಿಜ್ಞಾನ, ಮಹಿಳಾ, ಮಕ್ಕಳ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ತಾರಿಹಾಳ ಕೈಗಾರಿಕಾ ಪ್ರದೇಶದ ಐಸಿ ಫ್ಲೇಮ್ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದ ನಂತರ ಜಿಲ್ಲೆಯ 16 ಕೈಗಾರಿಕಾ ವಸಾಹತು ಪ್ರದೇಶಗಳಲ್ಲಿನ 2248 ಕೈಗಾರಿಕಾ ಘಟಕಗಳ ಸಮೀಕ್ಷೆಗಾಗಿ 10 ತಂಡಗಳನ್ನು ರಚಿಸಲಾಗಿದೆ. ಜುಲೈ 29ರವರೆಗೆ 1319 ಘಟಕಗಳನ್ನು ಸಮೀಕ್ಷೆ ಮಾಡಲಾಗಿದೆ. ವಿವಿಧ ಇಲಾಖೆಗಳ ಪರವಾನಿಗೆಗಳನ್ನು ಪಡೆಯದ, ನಿಯಮ ಉಲ್ಲಂಘಿಸಿದ ಕೈಗಾರಿಕೆಗಳಿಗೆ ನೋಟಿಸ್ ನೀಡಿ ತಪ್ಪು ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಸಂಪೂರ್ಣ ಕಾನೂನು ಉಲ್ಲಂಘನೆ ಮಾಡಿರುವ ಕೈಗಾರಿಕೆಗಳನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. 

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಕುಡಿಯುವ ನೀರಿನ ಗುಣಮಟ್ಟದ ಬಗ್ಗೆ ನಾಗರಿಕರಿಂದ ಪ್ರತಿನಿತ್ಯ ದೂರುಗಳು ಬರುತ್ತಿವೆ. ಒಳಚರಂಡಿ ಮಾರ್ಗ ಬದಲಿಸಲು ಸರ್ಕಾರ ಹಣಕಾಸು ನೆರವು ನೀಡಬೇಕು. ಮಹಾನಗರ ಪಾಲಿಕೆಯ ಎಲ್ಲ ಕಾಮಗಾರಿಗಳಿಗೆ ನಗರಾಡಳಿತ ನಿರ್ದೇಶನಾಲಯದ ಅನುಮತಿ ಪಡೆಯುವ ವ್ಯವಸ್ಥೆ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿದರು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಮಾತನಾಡಿ, ಅವಳಿ ನಗರದಲ್ಲಿ ಎಲ್‌ಇಡಿ ಬೀದಿ ದೀಪಗಳನ್ನು ಪ್ರಾಯೋಗಿಕವಾಗಿ ಅಳವಡಿಸಿ ಪರೀಕ್ಷೆ ಮಾಡಲು ಕೆಲವು ಏಜೆನ್ಸಿಗಳು ಮುಂದೆ ಬಂದಿವೆ. ಅವುಗಳಿಗೆ ಅವಕಾಶ ನೀಡಿ ಪರೀಕ್ಷಿಸಬೇಕು ಎಂದರು. 

ಇದನ್ನೂ ಓದಿ: PSI Recruitment scam : ಪಿಎಸ್ಐ ನೇಮಕಾತಿ ಅಕ್ರಮ : ಸ್ಟ್ರಾಂಗ್ ರೂಮ್ ಗೆ ನುಗ್ಗಿ 22 OMR ಶೀಟ್ ತಿದ್ದಿದ್ದ ಪೊಲೀಸರು

ಶಾಸಕ ಅಮೃತ ದೇಸಾಯಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಪಂ ಸಿಇಒ ಡಾ.ಸುರೇಶ ಇಟ್ನಾಳ, ಪಾಲಿಕೆ ಆಯುಕ್ತ ಡಾ.ಬಿ. ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಡಿಸಿಪಿ ಸಾಹಿಲ್ ಬಾಗ್ಲಾ, ಲೋಕೋಪಯೋಗಿ ಇಲಾಖೆ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧೀಕ್ಷಕ ಇಂಜಿನಿಯರ್ ಶಿವಾನಂದ ನಾಯ್ಕ್, ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ಸಿ. ಹುರಕಡ್ಲಿ, ಉಪವಿಭಾಗಾಧಿಕಾರಿ ಅಶೋಕ ತೇಲಿ, ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿ ಅಜೀಜ್ ದೇಸಾಯಿ, ತಹಶೀಲ್ದಾರರಾದ ಶಶಿಧರ್ ಮಾಡ್ಯಾಳ, ಪ್ರಕಾಶ ನಾಶಿ, ಸಂತೋಷ ಹಿರೇಮಠ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. 

ಬಾಡ ರಸ್ತೆ ಅಪಘಾತ ಪರಿಹಾರ ವಿತರಣೆ

ಧಾರವಾಡ ಸಮೀಪದ ಬಾಡ ಗ್ರಾಮದಲ್ಲಿ ಕಳೆದ ಮೇ 20 ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ 9 ಜನ ಮೃತಪಟ್ಟಿದ್ದರು. ಮೃತಪಟ್ಟವರಲ್ಲಿ ಧಾರವಾಡ, ಬೈಲಹೊಂಗಲ ಹಾಗೂ ನವಲಗುಂದ ತಾಲೂಕಿನ ನಿವಾಸಿಗಳಿದ್ದರು. ಈ ಪೈಕಿ ಧಾರವಾಡ ತಾಲೂಕಿನ ಐವರು ಮೃತರ ವಾರಸುದಾರರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಿಡುಗಡೆಯಾದ ತಲಾ 5 ಲಕ್ಷ ರೂ. ಪರಿಹಾರದ ಚೆಕ್‌ಗಳನ್ನು ಮನಗುಂಡಿಯ ಸಾವಿತ್ರಿ ಅಂಗಡಿ, ನಿಗದಿಯ ವಿಜಯಲಕ್ಷಿö್ಮ ದಾಸನಕೊಪ್ಪ, ಬಸವರಾಜ ದಾಸನಕೊಪ್ಪ, ಗೋವನಕೊಪ್ಪದ ಚನ್ನಬಸಪ್ಪ ತೋಟದ, ಬೆನಕನಕಟ್ಟಿಯ ಪವಿತ್ರಾ ಹಿರೇಮಠ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ರಾಜ್ಯದ ಸಚಿವರಾದ ಸಿ.ಸಿ.ಪಾಟೀಲ, ಹಾಲಪ್ಪ ಆಚಾರ್, ಶಾಸಕ ಅಮೃತ ದೇಸಾಯಿ ವಿತರಿಸಿದರು. 

ಹರ ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸಲು ಕರೆ 

ಅಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಆಗಸ್ಟ್ 13 ರಿಂದ 15ರವರೆಗೆ ಹರ್ ಘರ್ ತಿರಂಗಾ ಅಭಿಯಾನವನ್ನು ದೇಶದಾದ್ಯಂತ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಬಹುದು. ಈ ನಿಟ್ಟಿನಲ್ಲಿ ಸಾರ್ವಜನಿಕರ ಅಭಿಯಾನದ ಕುರಿತು ತಿಳುವಳಿಕೆ ಮೂಡಿಸಬೇಕಾಗಿದೆ. ಸಾಹಿತಿಗಳು, ಚಿತ್ರ ಕಲಾವಿದರು, ಕಿರು ಚಿತ್ರ, ಪಾಲಿಕೆಯ ರಾಯಭಾರಿಗಳ ಮೂಲಕ ಮಾಲ್‌ಗಳು, ಚಿತ್ರಮಂದಿರಗಳು, ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ. ಈ ಅಭಿಯಾನದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವಂತೆ ಮನವೊಲಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಅಧಿಕಾರಿಗಳಿಗೆ ತಿಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News