ಸುಳ್ಳು ಹೇಳುವುದರಲ್ಲಿ ನಿರ್ಮಲಾ ಸೀತಾರಾಮನ್‌ ಮೋದಿಯನ್ನೇ ಮೀರಿಸುತ್ತಿದ್ದಾರೆ: ದಿನೇಶ್‌ ಗುಂಡೂರಾವ್

Congress guarantee schemes: ʼನಮ್ಮವರೇ ನಮಗೆ ಮೂಲ' ಎಂಬಂತೆ ರಾಜ್ಯದಿಂದ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಉಂಡ ಮನೆಗೆ ದ್ರೋಹ ಬಗೆಯುವ ಕೆಲಸ ಮಾಡುತ್ತಿದ್ದಾರೆ‌. ನಮ್ಮ ರಾಜ್ಯಕ್ಕೆ ಕೇಂದ್ರದಿಂದ ತೆರಿಗೆಯಲ್ಲಿ, ಅನುದಾನದಲ್ಲಿ, ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ, ಅಕ್ಕಿ ಕೊಡುವ ವಿಚಾರದಲ್ಲಿ, ಮಹದಾಯಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳಲ್ಲಿ ಅನ್ಯಾಯವಾಗುತ್ತಿರುವುದು ಆ ಸೂರ್ಯ ಚಂದ್ರರಷ್ಟೇ ಸತ್ಯ.

Written by - Puttaraj K Alur | Last Updated : Feb 19, 2024, 06:09 PM IST
  • ಕರ್ನಾಟಕಕ್ಕೆ ಕೇಂದ್ರದಿಂದ ತೆರಿಗೆ ಅನ್ಯಾಯವಾಗುತ್ತಿರುವುದು ಅಂಗೈ ಹುಣ್ಣಿನಷ್ಟೇ ಸ್ಪಷ್ಟ
  • ನಿರ್ಮಲಾ ಸೀತಾರಾಮನ್ ಉಂಡ ಮನೆಗೆ ದ್ರೋಹ ಬಗೆಯುವ ಕೆಲಸ ಮಾಡುತ್ತಿದ್ದಾರೆ‌
  • ಗ್ಯಾರಂಟಿ ಯೋಜನೆಗಳಲ್ಲಿ ಹುಳುಕು ಕಂಡು ಹಿಡಿಯುವುದು ಮೊಸರಲ್ಲಿ ಕಲ್ಲು ಹುಡುಕಿದಂತೆ
ಸುಳ್ಳು ಹೇಳುವುದರಲ್ಲಿ ನಿರ್ಮಲಾ ಸೀತಾರಾಮನ್‌ ಮೋದಿಯನ್ನೇ ಮೀರಿಸುತ್ತಿದ್ದಾರೆ: ದಿನೇಶ್‌ ಗುಂಡೂರಾವ್ title=
ನಿರ್ಮಲಾ ಸೀತಾರಾಮನ್‌ ವಿರುದ್ಧ ಟೀಕೆ!

ಬೆಂಗಳೂರು: ಗ್ಯಾರಂಟಿ ಹುಳುಕುಗಳನ್ನು ಮುಚ್ಚಿಡಲು ಸಿಎಂ ಸಿದ್ದರಾಮಯ್ಯನವರು ಬೋಗಸ್ ವಾದ ಮಂಡಿಸುತ್ತಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ನಿರ್ಮಲಾರವರು ಸುಳ್ಳು ಹೇಳುವುದರಲ್ಲಿ ಇತ್ತೀಚೆಗೆ ಮೋದಿಯವರನ್ನೇ ಮೀರಿಸುತ್ತಿದ್ದಾರೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಟೀಕಿಸಿದ್ದಾರೆ. ಈ ಬಗ್ಗೆ ಸೋಮವಾರ ಸರಣಿ ಟ್ವೀಟ್‌ ಮಾಡಿರುವ ಅವರು, ʼಕರ್ನಾಟಕಕ್ಕೆ ಕೇಂದ್ರದಿಂದ ತೆರಿಗೆ ಅನ್ಯಾಯವಾಗುತ್ತಿರುವುದು ಅಂಗೈ ಹುಣ್ಣಿನಷ್ಟೇ ಸ್ಪಷ್ಟ. ತೆರಿಗೆ ಅನ್ಯಾಯದ ಬಗ್ಗೆ ನಾವು ಸಾಕ್ಷಿ ಸಮೇತ ತೋರಿಸಿದ್ದೇವೆ. ಆದರೂ ಅನ್ಯಾಯ ಮಾಡಿಲ್ಲವೆಂದು ನಿರ್ಮಲಾರವರು ವಿತಂಡ ವಾದ ಮಾಡುವುದ್ಯಾಕೆ.?ʼ ಎಂದು ಪ್ರಶ್ನಿಸಿದ್ದಾರೆ.

ʼನಮ್ಮ ಸರ್ಕಾರದ ಪಂಚ ಗ್ಯಾರಂಟಿಗಳು ಅಬಾಧಿತವಾಗಿ ಮುಂದುವರೆಯಲಿವೆ. ಗ್ಯಾರಂಟಿ ಯೋಜನೆಗಳಲ್ಲಿ ಯಾವ ಹುಳುಕುಗಳು ಇಲ್ಲ. ಸಚಿವೆ ನಿರ್ಮಲಾರವರು ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಹುಳುಕು ಕಂಡು ಹಿಡಿಯುವುದು ಮೊಸರಲ್ಲಿ ಕಲ್ಲು ಹುಡುಕಿದಂತೆ. ನಾವು ಕೇಂದ್ರದ ಬಳಿ ಕೇಳುತ್ತಿರುವುದು ನ್ಯಾಯಯುತವಾಗಿ ನಮಗೆ ಸೇರಬೇಕಾದ ತೆರಿಗೆ ಹಣವನ್ನು. ನಾವು ಮೋದಿಯವರ ತಿಜೋರಿಯಿಂದಾಗಲಿ, ಅಮಿತ್ ಶಾರವರ ಬ್ಯಾಂಕ್ ಖಾತೆಯಿಂದಾಗಲಿ ಅನುದಾನ ಕೇಳುತ್ತಿಲ್ಲ. ಈ ಸಾಮಾನ್ಯ ಜ್ಞಾನ ನಿರ್ಮಲಾರವರಿಗೆ ಇದ್ದರೆ ಸಾಕುʼ ಎಂದು ಕುಟುಕಿದ್ದಾರೆ.

ಇದನ್ನೂ ಓದಿ: ಕಾಟನ್‌ ಕ್ಯಾಂಡಿ ಮಾರಾಟಕ್ಕೆ ನಿಷೇಧ ಹೇರಿದ ಸರ್ಕಾರ..! ಏಕೆ ಗೊತ್ತೆ..?

ʼ6 ತಿಂಗಳ ಹಿಂದೆ BJP ಸರ್ಕಾರವಿದ್ದಾಗ ತೆರಿಗೆ ಅನ್ಯಾಯದ ಪ್ರಸ್ತಾಪವೇ ಇರಲಿಲ್ಲ ಎಂಬರ್ಥದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಮಾತಾಡಿದ್ದಾರೆ. ಅದು ಸತ್ಯ ಕೂಡ. ಯಾಕೆಂದರೆ ಮೋದಿಯವರ ಮುಂದೆ ನಡು ಬಗ್ಗಿಸಿ ನಿಲ್ಲಲು ಹೆದರುವ ಕರ್ನಾಟಕದ ಬಿಜೆಪಿ ನಾಯಕರು ತೆರಿಗೆ ಅನ್ಯಾಯದ ಬಗ್ಗೆ ಪ್ರಶ್ನೆ ಮಾಡಲು ಸಾಧ್ಯವೇ.? ಪ್ರಸ್ತಾಪಿಸಲು ಸಾಧ್ಯವೇ.? ಆದರೆ ನಾವು ಹಿಂದೆ ಪ್ರತಿಪಕ್ಷ ಸ್ಥಾನದಲ್ಲಿದ್ದಾಗಲೂ ತೆರಿಗೆ ಅನ್ಯಾಯದ ಬಗ್ಗೆ ಪ್ರಶ್ನಿಸುತ್ತಲೇ ಇದ್ದೇವೆ. ಹಿಂದಿನ BJP ಸರ್ಕಾರಕ್ಕೂ ಕೇಂದ್ರವನ್ನು ಪ್ರಶ್ನಿಸುವಂತೆ ಒತ್ತಾಯಿಸಿದ್ದೇವೆ‌. ಈ ಬಗ್ಗೆ ನಿರ್ಮಲಾ ಸೀತಾರಾಮನ್‌ರವರಿಗೆ ಅನುಮಾನಗಳಿದ್ದರೆ ಪರಿಶೀಲಿಸಬಹುದು‌ʼ ಎಂದು ದಿನೇಶ್‌ ಗುಂಡೂರಾವ್‌ ಟ್ವೀಟ್‌ ಮಾಡಿದ್ದಾರೆ. 

ʼಕೇಂದ್ರದಿಂದ ಯಾವುದೇ ತೆರಿಗೆ ಬಾಕಿಯಿಲ್ಲ, ಕೊಡಬೇಕಾಗಿರುವುದೆನ್ನಲ್ಲಾ ಕೊಟ್ಟಾಗಿದೆ ಎಂದು ಗಿಳಿಪಾಠ ಹೇಳುವ ನಿರ್ಮಲಾರವರು, 2109ರ ಬಜೆಟ್ ಗಾತ್ರ ಹಾಗೂ 2024ರ ಬಜೆಟ್ ಗಾತ್ರ ಎಷ್ಟಾಗಿದೆ ಎಂದು ತುಲನೆ ಮಾಡಲಿ. ಬಜೆಟ್ ಗಾತ್ರ ಹೆಚ್ಚಾದಂತೆ ರಾಜ್ಯಗಳಿಗೆ ಕೊಡಬೇಕಾದ ಅನುದಾನಗಳು ಹೆಚ್ಚಾಗಬೇಕು ಎಂಬುವುದು ಕಾಮನ್ ಸೆನ್ಸ್. 2019ರಲ್ಲಿ ನಮ್ಮ ರಾಜ್ಯಕ್ಕೆ ಬಂದ ಅನುದಾನವೆಷ್ಟು? ಈಗ 45 ಲಕ್ಷ ಕೋಟಿ ರೂ. ಬಜೆಟ್‌ನಲ್ಲಿ ಕೊಟ್ಟಿರುವ ಅನುದಾನವೆಷ್ಟು ಎಂದು ಪ್ರಾಮಾಣಿಕವಾಗಿ ಹೇಳಲಿ‌. ಇದನ್ನು ಬಿಟ್ಟು ಜನರ ಕಿವಿಗೆ ಹೂ ಮುಡಿಸುವ ವ್ಯರ್ಥ ಪ್ರಯತ್ನವೇಕೆ.?ʼ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ವಾಹನಗಳ ಗ್ರೀನ್ ಟ್ಯಾಕ್ಸ್: ಬಂಡೀಪುರಕ್ಕೆ 10 ತಿಂಗಳಲ್ಲಿ 4.5 ಕೋಟಿ ಆದಾಯ

ʼನಮ್ಮವರೇ ನಮಗೆ ಮೂಲ' ಎಂಬಂತೆ ರಾಜ್ಯದಿಂದ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಉಂಡ ಮನೆಗೆ ದ್ರೋಹ ಬಗೆಯುವ ಕೆಲಸ ಮಾಡುತ್ತಿದ್ದಾರೆ‌. ನಮ್ಮ ರಾಜ್ಯಕ್ಕೆ ಕೇಂದ್ರದಿಂದ ತೆರಿಗೆಯಲ್ಲಿ, ಅನುದಾನದಲ್ಲಿ, ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ, ಅಕ್ಕಿ ಕೊಡುವ ವಿಚಾರದಲ್ಲಿ, ಮಹದಾಯಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳಲ್ಲಿ ಅನ್ಯಾಯವಾಗುತ್ತಿರುವುದು ಆ ಸೂರ್ಯ ಚಂದ್ರರಷ್ಟೇ ಸತ್ಯ. ಈ ಸತ್ಯವನ್ನು ನಿರ್ಮಲಾ ಸೀತಾರಾಮನ್ ಸೇರಿದಂತೆ ಕರ್ನಾಟಕದ ಬಿಜೆಪಿ ನಾಯಕರು ಒಪ್ಪಿಕೊಳ್ಳಲಿ. ಕನಿಷ್ಟಪಕ್ಷ ಸತ್ಯ ಒಪ್ಪಿಕೊಂಡ ಕಾರಣಕ್ಕಾದರೂ ಕನ್ನಡಿಗರು ನಿಮ್ಮನ್ನು ಕ್ಷಮಿಸಬಹುದು‌ʼ ಎಂದು ಟ್ವೀಟ್‌ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News