ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ಆರ್‌ಡಿಎಕ್ಸ್ ಪತ್ತೆ

ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರ್‌ಡಿಎಕ್ಸ್ ಪತ್ತೆಯಾದ ಬಳಿಕ ವಿಮಾನ ನಿಲ್ದಾಣದಲ್ಲಿ ವಾಹನಗಳು ಮತ್ತು ಪ್ರಯಾಣಿಕರ ಚಲನವಲನಗಳನ್ನು ನಿಲ್ಲಿಸಲಾಯಿತು.  

Last Updated : Nov 1, 2019, 10:56 AM IST
ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ಆರ್‌ಡಿಎಕ್ಸ್ ಪತ್ತೆ  title=

ನವದೆಹಲಿ: ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಆರ್‌ಡಿಎಕ್ಸ್ ಹೊಂದಿರುವ ಬ್ಯಾಗ್ ಒಂದು ಶುಕ್ರವಾರ ಮುಂಜಾನೆ ಪತ್ತೆಯಾಗಿದೆ. ಮುಂಜಾನೆ 1 ಗಂಟೆ ಸುಮಾರಿಗೆ ಟರ್ಮಿನಲ್ -3 ರ ಆಗಮನದ ಪ್ರದೇಶದಲ್ಲಿ ಕಪ್ಪು ಬಣ್ಣದ ಟ್ರಾಲಿ ಚೀಲವನ್ನು ಸಿಐಎಸ್ಎಫ್ ಕಾನ್‌ಸ್ಟೆಬಲ್ ವಿ.ಕೆ.ಸಿಂಗ್ ಗಮನಿಸಿದರು.

ತಕ್ಷಣವೇ ಈ ವಿಷಯವನ್ನು ತಮ್ಮ ಉಸ್ತುವಾರಿ ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ ಅವರು ಬ್ಯಾಗ್ ಪರಿಶೀಲಿಸಿದರು. ಬ್ಯಾಗ್‌ನೊಳಗೆ ಆರ್‌ಡಿಎಕ್ಸ್‌ನ ಧನಾತ್ಮಕ ಸಂಕೇತವನ್ನು ಪರೀಕ್ಷಿಸಲಾಯಿತು. ಬ್ಯಾಗೇಜ್ ಅನ್ನು ಡಾಗ್ 'ಗೈಡ್' ಸಹ ಪರಿಶೀಲಿಸಿದೆ, ಬಳಿಕ ಬ್ಯಾಗ್‌ನಲ್ಲಿ ಸ್ಫೋಟಕ ಇರುವುದು ದೃಢಪಟ್ಟಿದೆ. ತಕ್ಷಣ, ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ (ಬಿಡಿಡಿಎಸ್) ಅನ್ನು ಕರೆಸಿ, ಪ್ರದೇಶವನ್ನು ಸುತ್ತುವರಿಯಲಾಯಿತು. ಜೊತೆಗೆ ವಿಮಾನ ನಿಲ್ದಾಣದಲ್ಲಿ ವಾಹನಗಳು ಮತ್ತು ಪ್ರಯಾಣಿಕರ ಚಲನವಲನಗಳನ್ನು ನಿಲ್ಲಿಸಲಾಯಿತು.

ಶುಕ್ರವಾರ (ನವೆಂಬರ್ 1, 2019) ಬೆಳಿಗ್ಗೆ 1.31 ರ ಸುಮಾರಿಗೆ ಬಿಡಿಡಿಎಸ್ ಸ್ಥಳವನ್ನು ತಲುಪಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಪ್ರಕಾರ ಕಾರ್ಯನಿರ್ವಹಿಸಿದೆ. ಚೀಲದ ಎಕ್ಸರೆ ಚಿತ್ರಗಳನ್ನು ತಂಡವು ತೆಗೆದುಕೊಂಡಿದ್ದು, ಇದು ಅನುಮಾನಾಸ್ಪದವಾಗಿದೆ.

ತರುವಾಯ, ಸಾಮಾನುಗಳನ್ನು ಸುರಕ್ಷಿತವಾಗಿ ಬೆಳಿಗ್ಗೆ 2.55 ಕ್ಕೆ ಪ್ರತ್ಯೇಕ ಪ್ರದೇಶದಲ್ಲಿನ ಕೂಲಿಂಗ್ ಪಿಟ್‌ಗೆ ಕೊಂಡೊಯ್ಯಲಾಗಿದೆ. ಅದರ ನಂತರ, ಆಗಮನದ ಪ್ರದೇಶದಲ್ಲಿ ಸಿಐಎಸ್ಎಫ್ ಸಂಪೂರ್ಣ ಶೋಧ ನಡೆಸಿತು. ಶೋಧ ಪೂರ್ಣಗೊಂಡ ನಂತರ ಮುಂಜಾನೆ 3.30 ಕ್ಕೆ ಪ್ರಯಾಣಿಕರು ಮತ್ತು ವಾಹನಗಳ ಸಂಚಾರವನ್ನು ಪುನರಾರಂಭಿಸಲಾಯಿತು.

ಇದಕ್ಕೂ ಮೊದಲು ಹಲವು ಭಯಭೀತರಾದ ಪ್ರಯಾಣಿಕರು ಟ್ವಿಟರ್‌ನಲ್ಲಿ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಆಗಮನದ ಟರ್ಮಿನಲ್‌ನಿಂದ ನಿರ್ಗಮಿಸಲು ಸ್ವಲ್ಪ ಸಮಯದವರೆಗೆ ಅನುಮತಿ ಇಲ್ಲ ಎಂದು ಮಾಹಿತಿ ನೀಡಿದರು.
 

Trending News