ಮೋದಿ ಸರ್ಕಾರದ ಮುಕ್ತ ವ್ಯಾಪಾರ ಒಪ್ಪಂದದ ಪ್ರಯತ್ನ ರೈತರ ಪಾಲಿನ ಮರಣಶಾಸನ: ಸಿದ್ದರಾಮಯ್ಯ

ನ್ಯೂಜಿಲೇಂಡ್, ಅಸ್ಟ್ರೇಲಿಯಾದಂತಹ ದೇಶಗಳಿಂದ ಅಗ್ಗದ ದರದ ಹಾಲು ಆಮದಿಗೆ ಅವಕಾಶ ನೀಡುವ RCEP ನಮ್ಮ ರೈತರನ್ನು ಬೀದಿ ಪಾಲು ಮಾಡಲಿದೆ. ನರೇಂದ್ರ ಮೋದಿ ಸರ್ಕಾರದ ಈ ಪ್ರಯತ್ನ ರೈತರ ಪಾಲಿನ ಮರಣಶಾಸನವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Written by - Divyashree K | Last Updated : Oct 23, 2019, 10:48 AM IST
ಮೋದಿ ಸರ್ಕಾರದ ಮುಕ್ತ ವ್ಯಾಪಾರ ಒಪ್ಪಂದದ ಪ್ರಯತ್ನ ರೈತರ ಪಾಲಿನ ಮರಣಶಾಸನ: ಸಿದ್ದರಾಮಯ್ಯ title=

ಬೆಂಗಳೂರು: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (RCEP)ದಡಿಯಲ್ಲಿ ನಡೆಲಿರುವ ಮುಕ್ತ ವ್ಯಾಪಾರ ಒಪ್ಪಂದ (FTA) ದೇಶದ ಕೃಷಿ ಕ್ಷೇತ್ರಕ್ಕೆ ಮಾರಕವಾಗಲಿದೆ ಎಂದು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ದೇಶದಲ್ಲಿ ಸುಮಾರು 10 ಕೋಟಿ ರೈತರ ಬದುಕು ಹೈನುಗಾರಿಕೆಯನ್ನು ಅವಲಂಬಿಸಿದೆ. ಕರ್ನಾಟಕದಲ್ಲಿಯೇ ಸುಮಾರು 86 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ನ್ಯೂಜಿಲೇಂಡ್, ಅಸ್ಟ್ರೇಲಿಯಾದಂತಹ ದೇಶಗಳಿಂದ ಅಗ್ಗದ ದರದ ಹಾಲು ಆಮದಿಗೆ ಅವಕಾಶ ನೀಡುವ RCEP ನಮ್ಮ ರೈತರನ್ನು ಬೀದಿ ಪಾಲು ಮಾಡಲಿದೆ. ನರೇಂದ್ರ ಮೋದಿ ಸರ್ಕಾರದ ಈ ಪ್ರಯತ್ನ ರೈತರ ಪಾಲಿನ ಮರಣಶಾಸನವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಾನು ಮುಖ್ಯಮಂತ್ರಿಯಾಗಿದ್ದಾಗ ಹೈನುಗಾರಿಕೆಯನ್ನು ಉತ್ತೇಜಿಸಲು 'ಕ್ಷೀರಧಾರೆ' ಮತ್ತು ಶಾಲಾ ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡಲು 'ಕ್ಷೀರಭಾಗ್ಯ' ಯೋಜನೆಗಳನ್ನು ಜಾರಿಗೆ ತಂದಿದ್ದೆ. ಮೋದಿಯವರ ಸರ್ಕಾರ ರೈತರು ಮತ್ತು ಶಾಲಾ ಮಕ್ಕಳ ಬದುಕು ಕಸಿಯಲು ಹೊರಟಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯುಪಿಎ ಸರ್ಕಾರ RCEP ಮಾತುಕತೆಯಲ್ಲಿ ಭಾಗಿಯಾಗಿದ್ದು ನಿಜ. ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ದೇಶದ ರೈತರ ಹಿತ ಕಾಪಾಡಲು ಕೆಲವು ಬದಲಾವಣೆಗಳನ್ನು ಬಯಸಿದ್ದರು. ಆದರೆ ಮೋದಿಯವರು ಅವರು ಇಡೀ ದೇಶವನ್ನು ಕತ್ತಲಲ್ಲಿಟ್ಟು ಈ ಒಪ್ಪಂದಕ್ಕೆ ಸಹಿ ಹಾಕಲು ಹೊರಟಿದ್ದಾರೆ. ಎಲ್ಲಿದೆ ಪಾರದರ್ಶಕತೆ? ನಮ್ಮ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿಯವರು FTA ವಿರೋಧಿಸಲು ಕರೆ ನೀಡಿರುವುದನ್ನು ಸ್ವಾಗತಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ನಮ್ಮ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ಬಿಜೆಪಿ ಸರ್ಕಾರದ ರೈತ ವಿರೋಧಿ ಒಪ್ಪಂದದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದ್ದಾರೆ.
 

 

Trending News