Photo Gallery: ರಿಷಭ್‍ ಶೆಟ್ಟಿ ಐಕಾನಿಕ್‍ ಡೈರೆಕ್ಟರ್; ರಕ್ಷಿತ್‍ ಶೆಟ್ಟಿಗೆ ಟ್ರೆಂಡಿಂಗ್‍ ಆ್ಯಕ್ಷರ್ ಪ್ರಶಸ್ತಿ ಪ್ರಧಾನ


ಕಳೆದ ವರ್ಷ ತಮ್ಮ ವಿಭಿನ್ನ ಪ್ರಯತ್ನದಿಂದ ಕನ್ನಡ ಚಿತ್ರರಂಗಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ತಂದುಕೊಟ್ಟ ‘ಕಾಂತಾರ’ ಖ್ಯಾತಿಯ ರಿಷಭ್‍ ಶೆಟ್ಟಿ ಈಗ ‘ಐಕಾನಿಕ್‍ ಡೈರೆಕ್ಟರ್’ ಆಗಿ ಹೊರಹೊಮ್ಮಿದ್ದಾರೆ. ಇನ್ನು, ‘777 ಚಾರ್ಲಿ’ ಚಿತ್ರದಲ್ಲಿ ತಮ್ಮ ಅದ್ಭುತ ಅಭಿನಯದಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾದ ರಕ್ಷಿತ್‍ ಶೆಟ್ಟಿ ‘ಟ್ರೆಂಡಿಂಗ್‍ ಆ್ಯಕ್ಟರ್’ ಆಗಿದ್ದಾರೆ. ಅವರಿಬ್ಬರಿಗೂ ಇಂಥದ್ದೊಂದು ಪ್ರಶಸ್ತಿಗೆ ಭಾಜನರಾಗಿರುವುದು ಇನ್ನೋವೇಟೀವ್‍ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ

1 /5

ರಕ್ಷಿತ್‍ ಶೆಟ್ಟಿ ಮಾತನಾಡಿ, ‘’777 ಚಾರ್ಲಿ’ ನನ್ನ ವೃತ್ತಿಜೀವನದ ವಿಶೇಷವಾದ ಸಿನಿಮಾ. ಪರಂವಾ ಸ್ಟುಡಿಯೋಸ್‍ನಡಿ ನಿರ್ಮಾಣವಾದ ಮೊದಲ ಪ್ಯಾನ್‍ ಇಂಡಿಯಾ ಚಿತ್ರ ಅದು. ಪರಂವಾದಲ್ಲಿ ನಾವು ಕಿರುಚಿತ್ರಗಳನ್ನು ಮಾಡುತ್ತಿದ್ದೆವು. ನಮ್ಮ ಬಳಿ ಬಜೆಟ್‍ ಇರಲಿಲ್ಲ. ಎರಡನೆಯ ಚಿತ್ರಕ್ಕೆ 20 ಸಾವಿರ ರೂ. ಬಜೆಟ್‍ ಇತ್ತು. ಹೀಗೆ ಮಾಡುತ್ತಾ ಮಾಡುತ್ತಾ ನಮ್ಮ ಚಿತ್ರವೊಂದು ರಾಷ್ಟ್ರ ಪ್ರಶಸ್ತಿ ಪಡೆದಿದೆ. ಬಹಳ ಖುಷಿಯ ವಿಚಾರ ಇದು. ಇನ್ನು, ಮನುಷ್ಯರ ಜೊತೆಗೆ ನಟನೆ ಮಾಡಬಹುದು. ಚಾರ್ಲಿ ಜೊತೆಗೆ ನಟನೆ ಮಾಡುವುದು ಸುಲಭದ ವಿಷಯವಾಗಿರಲಿಲ್ಲ. 170 ದಿನಗಳ ಚಿತ್ರೀಕರಣ, ಪ್ರತೀ ದೃಶ್ಯಕ್ಕೂ 40 ಟೇಕ್‍ಗಳು, ಪ್ರತೀ ಟೇಕ್‍ನಲ್ಲೂ ನಮ್ಮ ಅತ್ಯುತ್ತಮವಾದುದನ್ನೇ ಕೊಡಬೇಕು. ಹಾಗಾಗಿ, ಬಹಳ ಕಷ್ಟವಾದ ಸಿನಿಮಾ ಇದು. ಚಿತ್ರೀಕರಣದ ಕೊನೆಯ ದಿನ ನಿರ್ದೇಶಕ ಕಿರಣ್‍ ರಾಜ್‍ ಬಂದು, ‘ಚಾರ್ಲಿ 2’ ಮಾಡುವುದಕ್ಕೆ ಒಳ್ಳೆಯ ಐಡಿಯಾ ಇದೆ ಎಂದರು. ಅದಕ್ಕೆ ನಾನು, ಚಾರ್ಲಿಯನ್ನು ಇಟ್ಟುಕೊಂಡು ಸಿನಿಮಾ ಮಾಡಿ, ನಾನು ಬರಲ್ಲ ಎಂದೆ. ಚಾರ್ಲಿ ಜೊತೆಗೆ ಕೆಲಸ ಮಾಡುವುದು ಕಷ್ಟ. ಆದರೆ, ಇಂಥ ಪ್ರಶಸ್ತಿಗಳಿಂದ ಆ ಕಷ್ಟಗಳು ಮರೆತು ಹೋಗುತ್ತವೆ’ ಎಂದರು. ‘ಟ್ರೆಂಡಿಂಗ್‍ ಆ್ಯಕ್ಟರ್’ ಜೊತೆಗೆ ಎಂ.ಎಸ್‍.ಕೆ ಟ್ರಸ್ಟ್ ನೀಡುವ‘ದಾದಾ ಸಾಹೇಬ್‍ ಫಾಲ್ಕೆ - ಎಂ.ಎಸ್‍.ಕೆ ಟ್ರಸ್ಟ್’ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಯಿತು.

2 /5

ಈ ಸಂದರ್ಭದಲ್ಲಿ ಮಾತನಾಡಿದ ರಿಷಭ್‍ ಶೆಟ್ಟಿ, ‘’ಕಾಂತಾರ’ ಚಿತ್ರಕ್ಕೆ ಸಿಕ್ಕ ಪ್ರಶಸ್ತಿಗಳು ಮತ್ತು ಜನಪ್ರಿಯತೆ ಇವೆಲ್ಲವೂ ಸಲ್ಲಬೇಕಾಗಿರುವುದು ಕನ್ನಡಿಗರಿಗೆ. ಅವರು ಈ ಚಿತ್ರಕ್ಕೆ ಅದ್ಭುತ ಯಶಸ್ಸು ಕೊಟ್ಟು ಅಲ್ಲಿಂದ ಅದು ಬೇರೆಬೇರೆ ಭಾಷೆಗಳಿಗೆ ತಲುಪಿತು. ಹಾಗಾಗಿ, ಕನ್ನಡಿಗರಿಗೆ ಚಿರಋಣಿ. ಕನ್ನಡ ಚಿತ್ರಗಳು ರಾಷ್ಟ್ರ ಮಟ್ಟದಲ್ಲಿ ಜನಪ್ರಿಯತೆ ಪಡೆಯುತ್ತಿವೆ. ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿವೆ. ಆದರೆ, ಆ ಚಿತ್ರಗಳಿಗೆ ಇಲ್ಲಿ ಚಿತ್ರಮಂದಿರಗಳು ಸಿಗುವುದಿಲ್ಲ. ಹಾಗೆಯೇ, ಓಟಿಟಿಗಳಲ್ಲೂ ಪ್ರಾಧಾನ್ಯತೆ ಸಿಗುವುದಿಲ್ಲ. ಎನ್‍.ಎಫ್‍.ಡಿ.ಸಿ ಮತ್ತು ಫಿಲಂ ಬಜಾರ್ ಗಳಿಗೆ ಆಯ್ಕೆಯಾಗುವ ಚಿತ್ರಗಳಿಗೆ ಪ್ರದರ್ಶನವಾಗುವಂತೆ ಒಂದು ವೇದಿಕೆ ಕಲ್ಪಿಸಬೇಕು’ ಎಂದು  ಐ.ಎ.ಎಸ್‍ ಅಧಿಕಾರಿ ಅಪೂರ್ವ ಚಂದ್ರ ಅವರಿಗೆ ಮನವಿ ಸಲ್ಲಿಸಿದರು.

3 /5

ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಐ.ಎ.ಎಸ್‍ ಅಧಿಕಾರಿ ಅಪೂರ್ವ ಚಂದ್ರ ಭಾಗವಹಿಸಿ, ಚಿತ್ರೋತ್ಸವವನ್ನು ಉದ್ಘಾಟಿಸಿದರು. ಚಿತ್ರೋತ್ಸವದ ಅಧ್ಯಕ್ಷ ರಾಕ್‍ಲೈನ್‍ ವೆಂಕಟೇಶ್‍, ಫಿಲಂ ಫೆಡರೇಶನ್‍ ಆಫ್‍ ಇಂಡಿಯಾದ ಅಧ್ಯಕ್ಷ ರವಿ ಕೊಟ್ಟಾರ್ಕರ ಮತ್ತು ಹಲವು ಅಂತಾರಾಷ್ಟ್ರೀಯ ಖ್ಯಾತಿಯ ನಿರ್ದೇಶಕರು ಅತಿಥಿಗಳಾಗಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ರಕ್ಷಿತ್‍ ಶೆಟ್ಟಿ ಮತ್ತು ರಿಷಭ್‍ ಶೆಟ್ಟಿ ಅವರಿಗೆ ಪ್ರಶಸ್ತಿ ನೀಡಿ ಆತ್ಮೀಯವಾಗಿ ಗೌರವಿಸಲಾಯಿತು.

4 /5

ಇನ್ನೋವೇಟೀವ್‍ ಫಿಲಂ ಅಕಾಡೆಮಿ ಮತ್ತು ಇನ್ನೋವೇಟೀವ್‍ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಸ್ಥಾಪಕ ಶರವಣ ಪ್ರಸಾದ್‍, ಮಾರತ್‍ಹಳ್ಳಿಯ ಇನ್ನೋವೇಟೀವ್‍ ಮಲ್ಟಿಪ್ಲೆಕ್ಸ್ ನಲ್ಲಿ ಆಯೋಜಿಸಿರುವ ನಾಲ್ಕು ದಿನಗಳ 6ನೇ ಇನ್ನೋವೇಟೀವ್‍ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು. 

5 /5

ಈ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕರಾದ ಭಾರತೀರಾಜ, ರಾಜೇಂದ್ರ ಸಿಂಗ್‍ ಬಾಬು, ಚಿತ್ರರಂಗದಲ್ಲಿ 50 ವರ್ಷ ಪೂರೈಸಿರುವ ನಟ ಸಾಯಿಕುಮಾರ್ ಮುಂತಾದವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ತೆಲುಗು ನಟಿ ಮತ್ತು ಸಚಿವೆ ರೋಜಾ, ಹಿರಿಯ ನಟಿ ಅಂಬಿಕಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‍.ಎಂ. ಸುರೇಶ್‍ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.